Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಣ ಕ್ಷೇತ್ರದ ಹಲವು ಬೇಡಿಕೆ ಈಡೇರಿಸಲು ಬಜೆಟ್ ವಿಫಲ: AIDSO

ರಾಜ್ಯದ ಸರ್ಕಾರಿ‌ ಕಾಲೇಜುಗಳಲ್ಲಿನ ಮೂಲ ಸೌಲಭ್ಯಗಳಿಗಾಗಿ ಹೆಚ್ಚಿನ ಅನುದಾನ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಿ.ಇ.ಟಿ ಹಾಗೂ ನೀಟ್ ತರಬೇತಿ ನೀಡುವ ನಿರ್ಧಾರವನ್ನು ಸ್ವಾಗತಿಸಿರುವ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO), ಶಿಕ್ಷಣ ಕ್ಷೇತ್ರದ ಹಲವು ಬೇಡಿಕೆಗಳನ್ನು ಈಡೇರಿಸಲು ಬಜೆಟ್ ವಿಫಲವಾಗಿದೆ ಎಂದು ಟೀಕಿಸಿದೆ.

ಪ್ರತಿ ವರ್ಷ ಬಜೆಟ್ ನ ಶೇ. 30 ನ್ನು ಶಿಕ್ಷಣಕ್ಕೆ ನೀಡಬೇಕೆಂಬ ಜನಸಾಮಾನ್ಯರ, ವಿದ್ಯಾರ್ಥಿಗಳ ಒಕ್ಕೊರಲಿನ ಬೇಡಿಕೆಯನ್ನು ಕಡೆಗಣಿಸಿ ಶೇ 11.9 ಮಾತ್ರವೇ ನೀಡಿರುವುದು ನಿರಾಶಾದಾಯಕವಾಗಿದೆ. ಸರ್ಕಾರಿ ಶಾಲಾ, ಕಾಲೇಜುಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ಮಾತು ಬಜೆಟ್ ನಲ್ಲಿ ಕೇಳಿ ಬಂದರೂ ಶುಲ್ಕ ಏರಿಕೆಯ ಮೇಲೆ ನಿರ್ಬಂಧನೆ  ಹೇರುವುದರ ಕುರಿತಾಗಿ ಯಾವ ಉಲ್ಲೇಖವೂ ಇಲ್ಲ. ಎನ್.ಇ.ಪಿ ಶಿಫಾರಸ್ಸಿನಂತೆ ರಾಜ್ಯದ ಹಲವು ಕಾಲೇಜುಗಳನ್ನು ಸ್ವ ಹಣಕಾಸು ಸಂಸ್ಥೆಗಳನ್ನಾಗಿ ಮಾಡಿ ಅವುಗಳಲ್ಲಿನ ಶುಲ್ಕ ಕಳೆದ 2 ವರ್ಷಗಳಲ್ಲಿ 10 ಪಟ್ಟು ಹೆಚ್ಚಿಸಿರುವುದರ ಕುರಿತಾಗಿ ಸರ್ಕಾರದ ಗಮನಕ್ಕೆ ತಂದಿದ್ದರೂ ಸಹಿತ ಈ ಕುರಿತು ಕ್ರಮ ಕೈಗೊಳ್ಳದೇ ಇರುವುದು ರಾಜ್ಯ ಬಜೆಟ್ ವಿದ್ಯಾರ್ಥಿ ಪರವಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು AIDSO ಮಂಡ್ಯ  ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರವೇ ಹೇಳುವಂತೆ ಯು.ವಿ.ಸಿ.ಇ ಕಾಲೇಜಿಗೆ ಅವಶ್ಯಕವಿರುವುದು 500 ಕೋಟಿ, ಆ ಮೊತ್ತದಲ್ಲಿ 100 ಕೋಟಿಯನ್ನು ಮಾತ್ರವೇ ನೀಡಿ, ಉಳಿದ ಮೊತ್ತವನ್ನು ಹಳೇಯ ವಿದ್ಯಾರ್ಥಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳ ಸಹಾಯದಿಂದ ಪಡೆಯಬೇಕೆಂಬುದನ್ನು ಹೇಳುವುದರ ಮೂಲಕ ರಾಜ್ಯ ಸರ್ಕಾರ ಎನ್.ಇ.ಪಿ ಶಿಫಾರಸ್ಸುಗಳನ್ನು ಜಾರಿಗೊಳಿಸುತ್ತಿದೆಯೇ ಹೊರತಾಗಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಒತ್ತಾಸೆಗೆ ಯಾವ ಮನ್ನಣೆಯನ್ನೂ ನೀಡಿಲ್ಲ ಎಂದು ದೂರಿದ್ದಾರೆ.

ಈ ಬಾರಿ ಮತ್ತೊಮ್ಮೆ ರಾಜ್ಯದ ಬಡ – ಗ್ರಾಮೀಣ ಭಾಗದ ಶಾಲಾ ಹಾಗೂ ಪದವಿ ವಿದ್ಯಾರ್ಥಿಗಳು ಉಚಿತ ಸೈಕಲ್ – ಉಚಿತ ಲ್ಯಾಪಟಾಪ್ ಯೋಜನೆಗಳಿಂದ ವಂಚಿತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಡಿ.ಬಿ.ಟಿ(ಡೈರೆಕ್ಟ್ ಬ್ಯಾಂಕ್ ಟ್ರಾನ್ಸಫರ್) ಜಾರಿ ತಂದಾಗಿನಿಂದಲೂ ಶಿಷ್ಯವೇತನ ಕೈಗೆ ಸಿಗದೇ ಪರದಾಡುತ್ತಿರುವ ವಿದ್ಯಾರ್ಥಿಗಳ ಅಹವಾಲಿಗೂ ರಾಜ್ಯ ಸರ್ಕಾರ ಕಿವಿಗೊಟ್ಟಿಲ್ಲ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರ ನೀಡುವ ಹಣ ಸಾಲುತ್ತಿಲ್ಲ ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ, ಸರ್ಕಾರ ಶಾಶ್ವತ ಪರಿಹಾರ ನೀಡದಿರುವುದು ದುರಂತ ಎಂದು ಹೇಳಿದ್ದಾರೆ.

ಸರ್ಕಾರ ಎಸ್.ಇ.ಪಿ ಸಮಿತಿಯ ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರುವ ಭರವಸೆ ನೀಡಿದೆ.‌ ರಾಜ್ಯದಲ್ಲಿ ಎನ್.ಇ.ಪಿ ಯನ್ನು ಜಾರಿಗೆ ತಂದಾಗಿನಿಂದ ಉಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಎನ್.ಇ.ಪಿ ಯ ಎಲ್ಲಾ ಶಿಫಾರಸ್ಸುಗಳನ್ನು ವಾಪಸ್ಸು ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!