Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ; ವಿವಿಧ ಗ್ರಾ.ಪಂ.ಗಳಿಗೆ ಉಪ ಚುನಾವಣೆ : ಫೆ.25ಕ್ಕೆ ಮತದಾನ


ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳನ್ನು ಭರ್ತಿಮಾಡಲು ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅಧಿಸೂಚನೆ ಹೊರಡಿಸಿದ್ದಾರೆ.

ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮ ಪಂಚಾಯಿತಿಯ 5, ಡಣಾಯಕನಪುರ-2 ಕ್ಷೇತ್ರದ ಖಾಲಿ ಇರುವ 1 ಸದಸ್ಯ(ಸಾಮಾನ್ಯ) ಸ್ಥಾನಕ್ಕೆ, ಹುಲಿವಾನ ಗ್ರಾಮ ಪಂಚಾಯಿತಿಯ 1, ಹುಲಿವಾನ-1 ಕ್ಷೇತ್ರದ ಖಾಲಿ ಇರುವ 1 ಸದಸ್ಯ (ಅನುಸೂಚಿತ ಜಾತಿ ಮಹಿಳೆ) ಸ್ಥಾನಕ್ಕೆ ಮತ್ತು ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮ ಪಂಚಾಯಿತಿಯ 5, ಕುರಹಟ್ಟಿ ಕ್ಷೇತ್ರದ ಖಾಲಿ ಇರುವ 1 ಸದಸ್ಯ  (ಪ.ಪಂ.ಮಹಿಳೆ) ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು.

ನಾಮಪತ್ರ ಸಲ್ಲಿಕೆಗೆ ಅವಕಾಶ 

ನಾಮಪತ್ರ ಸಲ್ಲಿಸಲು ಫೆಬ್ರವರಿ 14 ಕೊನೆಯ ದಿನಾಂಕವಾಗಿದ್ದು, ಫೆಬ್ರವರಿ 15 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು  ಫೆಬ್ರವರಿ 17 ಕೊನೆಯ ದಿನಾಂಕವಾಗಿದ್ದು, ಮತದಾನ ಅವಶ್ಯವಿದ್ದರೆ ಮತದಾನ ಫೆಬ್ರವರಿ 25 ರಂದು (ಬೆಳ್ಳಿಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ) ನಡೆಸಲಾಗುವುದು. ಮತ ಎಣಿಕೆ ಕಾರ್ಯವು ಫೆಬ್ರವರಿ 28 ರಂದು ಬೆಳ್ಳಿಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು. ಚುನಾವಣೆ ಕಾರ್ಯವನ್ನು ಫೆಬ್ರವರಿ 28 ರಂದು ಮುಕ್ತಾಯಗೊಳಿಸಲಾಗುವುದು.

ಚುನಾವಣಾಧಿಕಾರಿಗಳ ನೇಮಕ

ಚುನಾವಣಾ ಕೆಲಸಗಳಿಗೆ 3 ಚುನಾವಣಾಧಿಕಾರಿ ಹಾಗೂ 3 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ, ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿs ಫೆಬ್ರವರಿ08ರಿಂದ   28ರವರೆಗೆ ಜಾರಿಯಲ್ಲಿರುತ್ತದೆ. ಗ್ರಾಮ ಪಂಚಾಯಿತಿಯ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯದ ಸಂದರ್ಭದಲ್ಲಿ ಅಥವಾ ಅವಿರೋಧ ಆಯ್ಕೆಯಾಗಿ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ನಿಂತುಹೋಗುತ್ತದೆ.

ಮದ್ಯ ನಿಷೇಧ 

ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕ ಘಟಕಗಳನ್ನು ಅದರ ಮಾಲೀಕರು, ಅದಿಭೋಗದಾರರು ಸಂದರ್ಭಾನುಸಾರ ಅದರ ವ್ಯವಸ್ಥಾಪಕರು ಮುಚ್ಚತಕ್ಕದ್ದೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಗ್ರಾಮ ಪಂಚಾಯಿತಿ ಉಪ ಚುನಾವಣೆಯು ಮತಪತ್ರಗಳ ಮೂಲಕ ನಡೆಯಲಿದ್ದು, ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತಚಲಾಯಿಸುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!