Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಲಪಾತೋತ್ಸವಕ್ಕೆ ಅಡ್ಡಿಪಡಿಸುವ ಉದ್ದಟತನ ಬೇಡ : ಸಿ.ಡಿ.ಗಂಗಾಧರ್

ಮಾಜಿ ಶಾಸಕ ಅನ್ನದಾನಿ ತಮ್ಮ ವೈಯಕ್ತಿಕ ಹಿತಸಕ್ತಿಗೋಸ್ಕರ ಮಂಡ್ಯ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ಜಲಪಾತೋತ್ಸವಕ್ಕೆ ಅಡ್ಡಿಪಡಿಸುವುದು ಹೇಳಿಕೆ ನೀಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅಗ್ಗದ ಪ್ರಚಾರ ಬಿಡಿ, ಒಳ್ಳೆಯ ಕೆಲಸಗಳಿಗೆ ಸಲಹೆ ಸಹಕಾರ ನೀಡಿ ಸ್ವೀಕರಿಸುತ್ತೇವೆ. ಅದನ್ನು ಬಿಟ್ಟು ಈ ರೀತಿಯ ಉದ್ಧಟದ ಪ್ರದರ್ಶನ ಬೇಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿರುಗೇಟು ನೀಡಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಬರದ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ವರುಣನ ಅವಕೃಪೆಯಿಂದ ಕೆ.ಆರ್.ಎಸ್. ಜಲಾಶಯ ತುಂಬಿದ್ದು, ಈ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ನಮ್ಮ ಹೆಮ್ಮೆ, ಇದಕ್ಕೆ ಅಡ್ಡಿಪಡಿಸುವುದಾಗಿ ಹೇಳಿರುವ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಶೋಭೆ ತರುವುದಿಲ್ಲ

ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಲಪಾತೋತ್ಸವಕ್ಕೆ ಸಿದ್ದತೆ ನಡೆಸುತ್ತಿರುವ ವೇಳೆ ಜನರಿಂದ ತಿರಸ್ಕೃತಗೊಂಡಿರುವ ಮಾಜಿ ಶಾಸಕರೊಬ್ಬರು ಜಲಪಾತೋತ್ಸವಕ್ಕೆ ಅಡ್ಡಿ ಪಡಿಸಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಹರಿಹಾಯ್ದರು.

ನಾಡಿನ ಜನತೆ ಗಗನಚುಕ್ಕಿ ಜಲಪಾತೋತ್ಸವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಬಿಟ್ಟಿ ಪ್ರಚಾರಕ್ಕೆ ಇಂತಹ ಅಸೂಹೆ ಹೇಳಿಕೆಗಳನ್ನು ಬಿಡಿ. ಜಲಪಾತೋತ್ಸವಕ್ಕೆ ಅಡ್ಡಿಪಡಿಸುವುದರಿಂದ ತಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಎಂದು ಲೇವಡಿ ಮಾಡಿದರು.

ಕಡೇ ಭಾಗಕ್ಕೆ ನೀರು ಹರಿಸಿಲ್ಲ. ಕೆರೆಕಟ್ಟೆಗಳನ್ನು ತುಂಬಿಸಿಲ್ಲ ಎಂದು ಹೇಳುತ್ತಿರುವ ಮಾಜಿ ಶಾಸಕರು ಇಷ್ಟು ದಿನ ಏನು ಮಾಡುತ್ತಿದ್ದರು. ಜಲಪಾತೋತ್ಸವಕ್ಕೆ ಸಿದ್ದತೆ ನಡೆಸುವಾಗ ಜ್ಞಾನೋದಯವಾಯಿತೆ ಎಂದು ಪ್ರಶ್ನಿಸಿದರು.

ಕಡೇ ಭಾಗಕ್ಕೆ ನೀರು ಹರಿಸುತ್ತಿಲ್ಲ ಎಂದು ಖುದ್ದು ಶಾಸಕ ನರೇಂದ್ರಸ್ವಾಮಿ ಅವರೇ ಜಿಲ್ಲಾ ಪಂಚಾಯತ್‌ನಲ್ಲಿ ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಸಿದ್ದವಿದೆ ಎಂದು ಹೇಳಿದರು.

ಯಾವ ನೈತಿಕತೆ ಇದೆ

ಈಗಾಗಲೇ ಕಳೆದೊಂದು ತಿಂಗಳಿಂದ ನಿರಂತರವಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಕೆರೆ ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕೈಯಲ್ಲಿ ಹೇಳಿಸಿಕೊಂಡು ಮಾಡುವ ಪ್ರಮೇಯ ಬಂದಿಲ್ಲ. ಮಾಜಿ ಶಾಸಕ ಡಾ.ಕೆ.ಅನ್ನದಾನಿಗೆ ಯಾವ ನೈತಿಕತೆ ಇದೆ ಎಂದು ಹರಿಹಾಯ್ದರು.

ವಿ.ಸಿ.ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ನಾಲಾ ಆಧುನೀಕರಣ ನಡೆಯುತ್ತಿದೆ. ಸಂಪೂರ್ಣ ಕಾಮಗಾರಿಗೆ ಡಿಸೆಂಬರ್ ವರೆಗೆ ಕಾಲಾವಕಾಶ ಬೇಕು. ರೈತರಿಗೆ ತೊಂದರೆಯಾಗಬಾರದು ಎಂದು ನಾಲೆಗಳಿಗೆ ನೀರು ಹರಿಸಲಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು.

ಖಾಸಗಿ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಕಬ್ಬನ್ನು ಮಾತ್ರ ಅರೆಯಬೇಕು. ತಮ್ಮ ವ್ಯಾಪ್ತಿಯ ಕಬ್ಬನ್ನು ಉಳಿಸಿಕೊಂಡು ಮೈಶುಗರ್ ಕಬ್ಬನ್ನು ಕಟಾವು ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.

ಮೈಶುಗರ್ ಕಾರ್ಖಾನೆಯಲ್ಲಿ 2.50 ಲಕ್ಷ ಟನ್ ಕಬ್ಬು ಅರೆಯುತ್ತೇವೆ. ಈಗಾಗಲೇ 61 ಸಾವಿರ ಟನ್ ಕಬ್ಬು ಅರೆಯಲಾಗಿದೆ. ಕಬ್ಬು ಕಟಾವಿನಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ನಹೀಂ, ನಗರಸಭೆ ಸದಸ್ಯ ಶ್ರೀಧರ್, ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್ ಹಾಗೂ ಚಂದಗಾಲು ಹೆಚ್.ಬಿ.ವಿಜಯ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!