ನಿಖಿಲ್ ಕುಮಾರಸ್ವಾಮಿ ಸೋಲಿಗೆ ಪ್ರತಿಕ್ರಿಯೆ ನೀಡಿರುವ ಸಿ.ಪಿ.ಯೋಗೇಶ್ವರ್ ದೇವೇಗೌಡರನ್ನು ಮನೆಯಲ್ಲೇ ಇರಿ ಎಂಬ ಹೇಳಿಕೆ ನೀಡಿದ್ದಾರೆ, ಆದರೆ ದೇವೇಗೌಡರು ಸೋತರೂ ಮನೆಯಲ್ಲಿ ಕೂರುವವರಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆದ್ದಿದ್ದಾರೆ. ಜನರು ನೀಡಿದ ತೀರ್ಪಿಗೆ ನಾವು ತಲೆಬಾಗಿದ್ದೇವೆ. ಯೋಗೇಶ್ವರ್ ಗೆಲುವಿನ ಮದದಲ್ಲಿ ದೇವೇಗೌಡರನ್ನು ಮನೆಯಲ್ಲಿ ಇರಿ ಎನ್ನುವುದು, ಕುಮಾರಸ್ವಾಮಿ ಅವರನ್ನು ರಣಹೇಡಿ ಎಂದಿರುವುದು ಸರಿಯಲ್ಲ, ಈ ಮಾತಿನಿಂದ ಅವರ ಗೌರವ ಹೆಚ್ಚಾಗುವುದಿಲ್ಲ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿ, ಶ್ರೇಷ್ಠ ನಾಯಕರಾಗುವ ಭ್ರಮೆಯಲ್ಲಿದ್ದಾರೆ ಎಂದರು.
ಚುನಾವಣೆಯಲ್ಲಿನ ಸೋಲು ಯೋಗೇಶ್ವರ್ಗೂ ಸಹ ಹೊಸತಲ್ಲ, ಯೋಗೇಶ್ವರ್ ಎಷ್ಟು ಸಲ ಸೋತಿದ್ದಾರೆ ಎಂಬುದು ನಮಗೆ ಗೊತ್ತು. ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಿದ್ದರು. ಮಂಡ್ಯ ಲೋಕಸಭಾ ಚುನಾವಣೆಗೆ ಅನಿವಾರ್ಯವಾಗಿ ನಿಖಿಲ್ ಅವರನ್ನು ಕರೆತಂದೆವು, ಮಂಡ್ಯದಲ್ಲಿಯೂ ಸಹ ಅಂಬರೀಶ್ ಅಣ್ಣನ ಅನುಕಂಪದ ಹಿನ್ನೆಲೆ ನಿಖಿಲ್ಗೆ ಸೋಲಾಗಿತ್ತು ಎಂದು ಸಮರ್ಥಿಸಿಕೊಂಡರು.
ಚನ್ನಪಟ್ಟಣಕ್ಕೆ ನೀರಾವರಿ ಒದಗಿಸಲು ಇಗ್ಗಲೂರು ಡ್ಯಾಂ ಕಟ್ಟಿದು ದೇವೇಗೌಡರು, ರಾಮನಗರ ಚನ್ನಪಟ್ಟಣ ತಾಲೂಕುಗಳಿಗೆ ಕಾವೇರಿ ನೀರು ಒದಗಿಸಲು ಕುಮಾರಸ್ವಾಮಿ ಅವರು ಹಲವು ಯೋಜನೆಯನ್ನು ರೂಪಿಸಿದ್ದಾರೆ. ದೇವೇಗೌಡರು ಕಟ್ಟಿದ ಡ್ಯಾಂ ನಿಂದ 17 ಕೆರೆ ತುಂಬಿಸಿ ನಾನೇ ಭಗೀರಥ ಅನ್ನೋದು ಅಲ್ಲ ಎಂದು ಕುಟುಕಿದರು.
ಜೆಡಿಎಸ್ ಪಕ್ಷವನ್ನ ಮುಗಿಸುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಪಕ್ಷದಿಂದ ಒಬ್ಬನನ್ನು ಕರೆದುಕೊಂಡು ಹೋಗು ನೋಡೋಣ. ಈ ಹಿಂದೆ ಬಿಟ್ಟಿ ದುಡ್ಡು ಸಿಕ್ಕೋದ್ರಿಂದ ಒಂದಷ್ಟು ಜನರನ್ನು ಕರೆದುಕೊಂಡು ಹೋಗಿದ್ದಿರಿ, ಈಗ ಯಾರೂ ಎಲ್ಲರೂ ದುಡ್ಡಿನ ಹಿಂದೆ ಬಿದ್ದಿಲ್ಲ ಎಂದು ಟಾಂಗ್ ನೀಡಿದ ಸಿ.ಎಸ್.ಪುಟ್ಟರಾಜು ದೇವೇಗೌಡ ಬಗ್ಗೆ ಎಚ್ಚರವಹಿಸಬೇಕೆಂದರು.
ಜೆಡಿಎಸ್ ಪಕ್ಷದಲ್ಲಿ ಜಿ.ಟಿ.ದೇವೇಗೌಡರ ಅಸಮಾಧಾನ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದ ಅವರು, ಪಕ್ಷ ಎಂದರೇ ಸಣ್ಣಪುಟ್ಟ ಅಸಮಾಧಾನ ಇರುವುದು ಸಾಮಾನ್ಯ ಅದನ್ನು ಸರಿಪಡಿಸುವ ಕೆಲಸವನ್ನ ಮಾಡುತ್ತೇವೆ. ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕೆಲಸವಾಗುತ್ತದೆ ಎಂದ ಅವರು, ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ನಡುವೆ ಭಿನ್ನಾಭಿಪ್ರಾಯ ಇದೆ ಅದನ್ನು ಸರಿಪಡಿಸುತ್ತೇವೆ ಎಂದು ಉತ್ತರ ನೀಡಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ರಾಮಚಂದ್ರು ಇದ್ದರು.




