Thursday, September 19, 2024

ಪ್ರಾಯೋಗಿಕ ಆವೃತ್ತಿ

ಉದ್ಯೋಗ ಕೊಡಿಸುವುದಾಗಿ ವಂಚನೆ | ಫ್ರೀಡಂ ಆ್ಯಪ್ ಸಿಇಓ ಸಿ.ಎಸ್‌.ಸುಧೀರ್‌ ವಿರುದ್ಧ ಎಫ್‌ಐಆರ್‌

ವಂಚನೆ ಮಾಡಿದ ಆರೋಪದ ಮೇಲೆ ಇಂಡಿಯನ್ ಮನಿ ಫ್ರೀಡಂ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್. ಸುಧೀರ್ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅರೆಕಾಲಿಕ ಕೆಲಸ ನೀಡುವ ಆಮಿಷವೊಡ್ಡಿ ತಮ್ಮ ಆ್ಯಪ್ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೆ ವಂಚಿಸಿರುವ ಆರೋಪ ಸಿ.ಎಸ್. ಸುಧೀರ್ ಅವರ ವಿರುದ್ಧ ಕೇಳಿಬಂದಿದ್ದು ಬನಶಂಕರಿ ಠಾಣೆ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

‘ವಂಚನೆಗೀಡಾಗಿರುವ ಯುವತಿ ಸೇರಿ 21 ಮಂದಿ ದೂರು ನೀಡಿದ್ದಾರೆ. ಅದರನ್ವಯ ಕಂಪನಿಯ ಸಂಸ್ಥಾಪಕರಾದ ಸುಧೀರ್ ಸೇರಿ 23 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.

‘ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದ ಕಂಪನಿಯವರು, ಆ್ಯಪ್‌ ಪ್ರಚಾರ ಮಾಡುವಂತೆ ಹೇಳಿದ್ದರು. ಹೆಚ್ಚು ಡೌನ್‌ಲೋಡ್‌ ಮಾಡಿಸಿದರೆ, ಚಂದಾರಾರನ್ನಾಗಿ ಮಾಡಿಸಿದರೆ, ಪ್ರತಿ ತಿಂಗಳು ₹ 15 ಸಾವಿರ ನೀಡುವುದಾಗಿ ನಂಬಿಸಲಾಗಿತ್ತು. ಅದರಂತೆ ಯುವಕ–ಯುವತಿಯರು, ಹಣ ಗಳಿಸಬಹುದೆಂದು ತಿಳಿದು ಸಂಬಂಧಿಕರು ಹಾಗೂ ಸ್ನೇಹಿತರನ್ನೇ ಚಂದಾದಾರರನ್ನಾಗಿ ಮಾಡಿಸಿದ್ದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.

“ಯುವಕ–ಯುವತಿಯರಿಂದ ಎಲ್ಲ ಕೆಲಸ ಮಾಡಿಸಿಕೊಂಡ ಕಂಪನಿಯವರು, ನಿಗದಿತ ದಿನದೊಳಗೆ ಸಂಬಳ ಕೊಟ್ಟಿಲ್ಲ. ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ. ಕಾರಣ ನೀಡದೇ ಎಲ್ಲರನ್ನೂ ಕೆಲಸದಿಂದ ತೆಗೆದಿದ್ದಾರೆ” ಎಂಬ ಆರೋಪಿಸಲಾಗಿದೆ.

ಜಾಮೀನು ಪಡೆದ ಆರೋಪಿಗಳು

“ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿಗಳಾದ ಸುಧೀರ್ ಹಾಗೂ ಇತರರು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ವಿಚಾರಣೆಗಾಗಿ ತನಿಖಾಧಿಕಾರಿ ಎದುರು ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ” ಎಂದು ತಿಳಿದುಬಂದಿದೆ.

“ಪ್ರಕರಣ ಸಂಬಂಧ ತನಿಖೆ ಪ್ರಾರಂಭವಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸುಧೀರ್‌ಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಸುಧೀರ್ ಠಾಣೆಗೆ ಬಂದಿದ್ದಾರೆ. ವಿಚಾರಣೆ ಆರಂಭಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ವಂಚನೆ ಮಾಡಲೆಂದು ಆ್ಯಪ್‌ ಅಭಿವೃದ್ಧಿ

“ಸಾರ್ವಜನಿಕರನ್ನು ವಂಚಿಸುವ ದುರುದ್ದೇಶದಿಂದ ಅಪರಾಧಿಕ ಸಂಚು ರೂಪಿಸಿ ಫ್ರೀಡಂ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಸಿ.ಎಸ್.ಸುಧೀರ್‌ ಮತ್ತು ಇತರರು ಆ್ಯಪ್‌ ರೂಪಿಸಿದ್ದು, ಇದರ ಪ್ರಚಾರಕ್ಕಾಗಿ ಅಮಾಯಕ ಯುವಕ- ಯುವತಿಯರನ್ನು ಬಳಸಿಕೊಳ್ಳಲಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಫ್ರೀಡಂ ಆ್ಯಪ್‌ ಕಿರಿಕಿರಿ

ಮುಖ್ಯವಾಹಿನಿ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಸುದ್ದಿ ವಿಡಿಯೊಗಳಲ್ಲಿ ನಡುನಡುವೆ ಈ ಫ್ರೀಡಂ ಆ್ಯಪ್‌ ಜಾಹೀರಾತು ಪ್ರತ್ಯಕ್ಷವಾಗುತ್ತಿರುವುದು ಭಾರೀ ಟೀಕೆಗೆ ಒಳಗಾಗಿದೆ. ಈ ಜಾಹೀರಾತಿನಿಂದ ಸಾಕಷ್ಟು ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!