Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಭ್ಯರ್ಥಿಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಪಕ್ಷದ ಟಿಕೆಟ್ : ಬಿ.ಎಸ್‌.ಶಿವಣ್ಣ

ಇಂದಿನ ರಾಜಕಾರಣದಲ್ಲಿ ಉತ್ತಮ ವ್ಯಕ್ತಿಗಳಿಗೆ, ವಿಚಾರವಂತರಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡುತ್ತಿಲ್ಲ, ಬದಲಾಗಿ ಆತನ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಟಿಕೆಟ್ ನೀಡಲಾಗುತ್ತಿದೆ. ರಿಯಲ್ ಎಸ್ಟೇಟ್, ಗಣಿ ಧಣಿಗಳ ಕೈಯಲ್ಲಿ ಚುನಾವಣೆ ವ್ಯವಸ್ಥೆ ಇದೆ ಎಂದು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಶಿವಣ್ಣ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ನಗರದ ಜೆ.ಪಿ.ಸ್ಮಾರಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಸಮಾ ಜವಾದದ ಚಿಂತನೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಾಳಾಗಿರುವ ಚುನಾವಣೆ ವ್ಯವಸ್ಥೆಯಿಂದಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹಣ ಮತ್ತು ಜಾತಿಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಮೊದಲೆಲ್ಲ ರೂ.3-4 ಲಕ್ಷಕ್ಕೆ ಚುನಾವಣೆ ನಡೆಯುತ್ತಿತ್ತು. ಆದರೆ ಇಂದು ಬಹು ಕೋಟಿ ಹಣ ಖರ್ಚು ಮಾಡಿ, ಚುನಾವಣೆಯಲ್ಲಿ ಗೆಲ್ಲಲಾಗುತ್ತಿದೆ. 2005ರ ನಂತರ ಬಿಜೆಪಿ-ಜೆಡಿಎಸ್ ಮೊದಲ ಮೈತ್ರಿಯ ಬಳಿಯ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ನಂತರ ಚುನಾವಣಾ ವ್ಯವಸ್ಥೆ ಕಲುಷಿತಗೊಂಡಿದೆ ಎಂದು ತಿಳಿಸಿದರು.

ದೇಶದ ಸಂವಿಧಾನಕ್ಕೆ ಗೌರವ ಕೊಡದವರ ಕೈಯಲ್ಲಿ ಅಧಿಕಾರ ಸಿಕ್ಕಿದೆ. ವೈಚಾರಿಕತೆ, ಸಮಾಜವಾದಕ್ಕೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಶಾಂತವೇರಿ ಗೋಪಾಲಗೌಡ, ಜೆ. ಎಚ್.ಪಟೇಲ್, ಸಿದ್ದರಾಮಯ್ಯ ಅವರು ಸಮಾಜವಾದಿಗಳಾಗಿದ್ದರು. ಅವರ ನಂತರದ ರಾಜಕಾರಣಿಗಳಿಗೆ ಸಮಾಜವಾದದ ಅರಿವೇ ಇಲ್ಲದಾಗಿದೆ ಎಂದು ಹೇಳಿದರು.

ಸರ್ಕಾರವನ್ನೇ ಪಕ್ಷಾಂತರ ಮಾಡುವಂತಹ ಪರಿಸ್ಥಿತಿ ಬಂದಿದೆ. ಒಬ್ಬ ಅಭ್ಯರ್ಥಿ ಗೆದ್ದ ನಂತರ ರಾಜೀನಾಮೆ ನೀಡಿ, ನಂತರ ಬೇರೆ ಪಕ್ಷದಲ್ಲಿ ಸ್ಪರ್ಧಿಸುವ ಪ್ರಕ್ರಿಯೆ ರದ್ದಾಗಬೇಕು. ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತಂದು ಪಕ್ಷಾಂತರ ಮಾಡುವ ಅಭ್ಯರ್ಥಿಗಳು ಕನಿಷ್ಠ 2 ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.

ಸಮಾರಂಭವನ್ನು ಸಮಾಜವಾದಿ ನಾಯಕ ರಘು ಠಾಕೂರ್ ಉದ್ಘಾಟಿಸಿದರು. ಮಾಜಿ ಸಚಿವ ಎಂ.ಎಸ್‌. ಆತ್ಮಾನಂದ, ಜೆ.ಪಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಎಚ್.ನಾರಾಯಣ, ಗೌರವ ಕಾರ್ಯದರ್ಶಿ ಕೌಡ್ಲೆಚನ್ನಪ್ಪ,  ವಿಚಾರವಾದಿ ಕೆ.ಮಾಯಿಗೌಡ, ಬಸವರಾಜು, ವೈ.ಎಸ್.ಸಿದ್ದರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!