Friday, September 20, 2024

ಪ್ರಾಯೋಗಿಕ ಆವೃತ್ತಿ

ಹೊಸ ವರ್ಷಕ್ಕೆ 119 ದಿನ ಪೂರೈಸಿದ ಕಾವೇರಿ ಹೋರಾಟ: ಜನಜಾಗೃತಿಗಾಗಿ ಕರಪತ್ರ ಚಳವಳಿ

ಕಳೆದ 2023ರ ಸೆಪ್ಟೆಂಬರ್ ನಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಾರಂಭಿಸಿದ ಮಂಡ್ಯದಲ್ಲಿನ ನಿರಂತರ ಕಾವೇರಿ ಹೋರಾಟ, ಹೊಸವರ್ಷದ ಮೊದಲ ದಿನಕ್ಕೆ 119ನೇ ದಿನಕ್ಕೆ ಕಾಲಿಟ್ಟಿದೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ಆದೇಶಕ್ಕೆ ಮಣಿದು ರಾಜ್ಯದಿಂದ ಕಾವೇರಿ ನೀರನ್ನು ಬಿಟ್ಟ ಸರ್ಕಾರದ ವಿರುದ್ದ ರೈತರ ಆಕ್ರೋಶ ಕೊಂಚವು ಕಡಿಮೆಯಾಗಿಲ್ಲ, ಪ್ರಾಧಿಕಾರವು ಮತ್ತೆ ಪ್ರತಿನಿತ್ಯ 1000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವುದರಿಂದ ಜನವರಿ ಅಂತ್ಯದವರೆಗೆ ಇದೆ ಹೋರಾಟದ ಕಾವನ್ನು ಕಾಯ್ದುಕೊಳ್ಳಲು ರೈತ ಹಿತರಕ್ಷಣಾ ಸಮಿತಿಯು ನಿರ್ಧರಿಸಿದೆ.

ಹೊಸವರ್ಷದ ದಿನವಾದ ಸೋಮವಾರ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯು ಕರಪತ್ರ ಚಳವಳಿ ಪ್ರಾರಂಭಿಸಿತು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕರಪತ್ರ ಹಂಚಿಕೆ ಮಾಡಲಾಯಿತು.

ಕಾವೇರಿ ಕುಟುಂಬದ ಪ್ರೊ. ಕೆ.ಸಿ ಬಸವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕರಪತ್ರ ಬಿಡುಗಡೆ ಮಾಡಿದರು, ಇದೆ ವೇಳೆ ಕಾವೇರಿ ಹೋರಾಟಗಾರರು ಸಾರ್ವಜನಿಕರಿಗೆ ಕರಪತ್ರ ಹಂಚಿಕೆ ಮಾಡುವ ಮೂಲಕ ಚಳವಳಿ ಮುನ್ನಡೆಸಿದರು.

ರಾಜ್ಯದ ಪರ ಸಂಸದರ ದನಿ ಇಲ್ಲವಾಗಿದೆ

ಕಾವೇರಿ ಕುಟುಂಬದ ಪ್ರೊ.ಕೆ ಸಿ ಬಸವರಾಜ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಧಾನಿ ಮುಂದೆ ಮಾತನಾಡಲು ಕರ್ನಾಟಕದ ಸಂಸದರಿಗೆ ಹಿಂಜರಿಕೆ ಇದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ ಎಂಬ ಭಯದಿಂದ ಕಾವೇರಿ ವಿವಾದದ ಬಗ್ಗೆ ಬಾಯಿ ಬಿಡುತ್ತಿಲ್ಲ ಹಾಗಾಗಿ ಕರ್ನಾಟಕದ ಪರ ಸಂಸತ್ತಿನಲ್ಲಿ ಧ್ವನಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಎಲ್ಲಾ ಪಕ್ಷಗಳು ಒಗ್ಗೂಡಿ ಹೋರಾಟ ಮಾಡುತ್ತವೆ, ದೆಹಲಿಯಲ್ಲಿ ಅವರ ಪ್ರಭಾವವಿದೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದು ಹೇಳಿದರು.

ಸಂಕಷ್ಟದ ಸಮಯದಲ್ಲಿ ರೈತರ ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ, ನ್ಯಾಯ ಮಂಡಳಿಯ ಅಂತಿಮ ತೀರ್ಪಿನಲ್ಲಿ ಸಂಕಷ್ಟ ಸೂತ್ರ ಇದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಿದ್ದಾರೆ, ಆ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದಲ್ಲಿ ಸಂಕಷ್ಟ ಸೂತ್ರ ವಿಚಾರ ಪ್ರಸ್ತಾಪಿಸಿ ಸಮರ್ಥವಾದ ಮಂಡಿಸಲು ವಿಫಲವಾಗಿದೆ ಎಂದು ಹೇಳಿದರು.

ರಾಜ್ಯದ ನಾಲ್ಕು ಜಲಾಶಯಗಳಲ್ಲಿ 100 ಟಿಎಂಸಿ ನೀರು ಸಂಗ್ರಹ ಇಟ್ಟುಕೊಂಡು ಮಳೆ ಕೊರತೆಯಿಂದ ಸಂಕಷ್ಟದ ಸನ್ನಿವೇಶ ಎದುರಾದಾಗ ಬಳಕೆ ಮಾಡಿಕೊಳ್ಳಬಹುದು, ಇಂತಹ ಸಂಕಷ್ಟ ಸನ್ನಿವೇಶದಲ್ಲಿ ಸಂಕಷ್ಟ ಪರಿಸ್ಥಿತಿಯನ್ನ ಎರಡು ರಾಜ್ಯಗಳು ಹಂಚಿಕೊಳ್ಳಬೇಕು ಎಂದು ಹೇಳಲಾಗಿದೆ, ಸಂಕಷ್ಟ ಸೂತ್ರದಂತೆ ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ 31 ಟಿಎಂಸಿ ನೀರು ಬಿಡಬೇಕಿತ್ತು ಆದರೆ ತಮಿಳುನಾಡಿಗೆ ಇದುವರೆಗೆ 62 ಟಿಎಂಸಿ ನೀರು ಹರಿಸಿದೆ, ಈ ತಿಂಗಳು ಮೂರು ಟಿಎಂಸಿ ನೀರು ಬಿಡಬೇಕಾಗಿದೆ ಎಂದು ಹೇಳಿದರು.

ಕಾವೇರಿ ನೀರನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವ ತಮಿಳುನಾಡು ರೈತರ ಹಿತ ಕಾಪಾಡಲು ರಾಜಕೀಯ ಇಚ್ಛಾಸಕ್ತಿ ಪ್ರದರ್ಶನ ಮಾಡುತ್ತದೆ, ಆದರೆ ಕರ್ನಾಟಕದಲ್ಲಿ ಇಚ್ಛಾ ಶಕ್ತಿ ಕೊರತೆ ಇದೆ, ಮುಂದಿನ ದಿನಗಳಲ್ಲಿ ಇಚ್ಚಾ ಶಕ್ತಿ ಪ್ರದರ್ಶಿಸಿ ಕಾವೇರಿ ನಮ್ಮದು ಎಂಬುದನ್ನ ಸಾರಬೇಕೆಂದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್, ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಬನ್ನೂರು ನಾರಾಯಣ, ಕೃಷ್ಣಪ್ರಕಾಶ್, ಅಂಬುಜಮ್ಮ, ಜೈ ಕರ್ನಾಟಕ ಪರಿಷತ್ ನ ಎಸ್ ನಾರಾಯಣ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!