Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಕ್ಕೆ ದಸರಾ ಸಂಭ್ರಮ- ರೈತರಿಗೆ ಜೀವಜಲದ ಚಿಂತೆ- 41ನೇ ದಿನಕ್ಕೆ ಕಾವೇರಿ ಹೋರಾಟ

ರಾಜ್ಯ ಸರ್ಕಾರ ನಾಡಹಬ್ಬ ಮೈಸೂರು ದಸರಾದ ಸಂಭ್ರಮದಲ್ಲಿ ಮುಳುಗಿದೆ, ಹಲವು ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳ ತಂಡವೇ ದಸರಾ ಯಶಸ್ವಿಗಾಗಿ ಓಡಾಟ ನಡೆಸುತ್ತಿದ್ದಾರೆ. ಹುಟ್ಟು ಹೋರಾಟದ ನೆಲ ಮಂಡ್ಯದಲ್ಲಿ ರೈತರು ಕಾವೇರಿ ರಕ್ಷಣೆಗಾಗಿ ಕಳೆದ 41 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಮೇಲಿಂದ ಮೇಲೆ ಸುಪ್ರಿಂ ಕೋರ್ಟ್ ಹಾಗೂ ಕಾವೇರಿ ನದಿ ನೀರು ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡುತ್ತಿರುವುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ರೈತರು ನಿರಂತರ  ಹೋರಾಟದ ಕಾವನ್ನು ಕಾಯ್ದುಕೊಂಡಿದ್ದಾರೆ.

ಪ್ರಾಧಿಕಾರ ಯಾವುದೇ ಆದೇಶ ನೀಡಿದರೂ ತಾವು ರಾಜ್ಯದ ಹಿತ ಕಾಪಾಡುತ್ತೇವೆಂದು ರಾಜ್ಯ ಸರ್ಕಾರವು ಹೇಳುತ್ತಿದೆಯಾದರೂ, ಅದನ್ನು ನಂಬಲು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ಮಂಡ್ಯ ಜಿಲ್ಲೆಯ ರೈತ ಸಮುದಾಯ ನಂಬಲು ಸಿದ್ದವಿಲ್ಲ. ಈ ಹಿಂದೆ ನ್ಯಾಯಾಲಯದ ಆದೇಶ ಹಾಗೂ ಪ್ರಾಧಿಕಾರದ ಸೂಚನೆಗೆ ಮಣಿದಿರುವ ಸರ್ಕಾರ, ರೈತರ ಕಣ್ತಪ್ಪಿಸಿ ಕದ್ದುಮುಚ್ಚಿ ನೀರು ಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದ ಹೋರಾಟಗಾರರು ಯಾರನ್ನು ನಂಬದೇ ತಮ್ಮ ಹೋರಾಟವನ್ನು ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ಧಾರೆ.

ದಸರಾ ಸಂಭ್ರಮ : ಕಾವೇರಿಗಾಗಿ ಹೋರಾಟ

ಇಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ವಿಶ್ ವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಸಚಿವರು ಮಂಡ್ಯ ಮೂಲಕವೇ ಹಾದು ಹೋಗಿದ್ದಾರೆ. ಆದರೆ ಈ ಬಾರಿ ನೂತನ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಯಾಗಿರುವುದರಿಂದ ಅವರು ಬೈಪಾಸ್ ಮೂಲಕ ಮೈಸೂರು ತಲುಪಿದರು, ಆದ್ದರಿಂದ ಮಂಡ್ಯದಲ್ಲಿ ಕಳೆದ 41 ದಿನಗಳಿಂದ ರೈತರು ನಡೆಯುತ್ತಿರುವ ಹೋರಾಟ ಅವರ ಕಣ್ಣಿಗೆ ಬೀಳಲೇ ಇಲ್ಲ.

ಹೆದ್ದಾರಿ ಉದ್ಘಾಟನೆಗೂ ಹಿಂದೆ ಮೈಸೂರು ದಸರಾಗೆ ಮುಖ್ಯಮಂತ್ರಿಗಳು ಮಂಡ್ಯನಗರವನ್ನು ಪ್ರವೇಶ ಮಾಡಿಯೇ ಸಾಗಬೇಕಿದ್ದು, ಆಗ ಹೋರಾಟಗಾರರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಹಕ್ಕೊತ್ತಾಯದ ಮನವಿ ಸಲ್ಲಿಸುತ್ತಿದ್ದರು. ಆದರೆ ಈಗ ಅಂತಹ ಸಂದರ್ಭವೇ ಇಲ್ಲದಂತಾಗಿದೆ. ಒಂದೆಡೆ ಸರ್ಕಾರ ಸಂಭ್ರಮದಲ್ಲಿದ್ದಾರೆ. ರೈತರು ಮಾತ್ರ ರಸ್ತೆಯಲ್ಲಿ ಹೋರಾಟ ನಡೆಸುವಂತಾಗಿದೆ.

ಸರ್ಕಾರದ ವಿರುದ್ದ ಆಕ್ರೋಶ 

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧದ ನಿರಂತರ ಧರಣಿ ಮುಂದುವರೆದಿದ್ದು, ಇಂದು ಭಾನುವಾರವು ಹಲವು ಮುಖಂಡರು ಪಾಲ್ಗೊಂಡು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ – ರಾಜ್ಯ ಸರ್ಕಾರ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ,ಪ್ರಾಧಿಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಸಂಸದರು ಮತ್ತು ಶಾಸಕರ ವಿರುದ್ದವೂ ಕಿಡಿಕಾರಿದರು.
ಬೇಸಾಯಕ್ಕೆ ನೀರು ಇಲ್ಲದೆ ಬೆಳೆಯು ಕೈ ಸೇರದೆ ರೈತರು ಸಂಕಷ್ಟದಲ್ಲಿದ್ದರೆ ಆಳುವ ಸರ್ಕಾರ ದಸರಾ ಮಹೋತ್ಸವದ ಸಡಗರ ಸಂಭ್ರಮದಲ್ಲಿದೆ. ಯಾರ ಬದುಕು ಇವರಿಗೆ ಬೇಕಾಗಿಲ್ಲ, ಅಧಿಕಾರ ಮಾತ್ರ ಮುಖ್ಯವಾಗಿದೆ,ಇಂತಹ ಸರ್ಕಾರದಿಂದ ರೈತರ ಹಿತ ಸಾಧ್ಯವೇ ಎಂದು ಪ್ರಶ್ನಿಸಿದರು.

ಹೋರಾಟದಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಕೆ.ಬೋರಯ್ಯ,ಕಸಾಪ ನಗರ ಘಟಕ ಅಧ್ಯಕ್ಷ ಸುಜಾತಕೃಷ್ಣ, ರೈತ ಸಂಘದ ಇಂಡವಾಳು ಚಂದ್ರಶೇಖರ್, ಮುಸ್ಲಿಂ ಮುಖಂಡ ಫಯಾಜ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!