ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿ, ಕೈಗಾರಿಕೋದ್ಯಮಿಗಳ ಪರವಾಗಿದ್ದು ಈ ದೇಶದ ಬಡ ನಾಗರಿಕರು ಬಡವರಾಗಿಯೇ ಉಳಿದಿದ್ದಾರೆ ಎಂದು ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ, ಮಾಜಿ ಸಚಿವರೂ ಆದ ಡಾ.ಬಿ.ಟಿ. ಲಲಿತನಾಯಕ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗುವಳಿ ಭೂಮಿ, ಗೋಮಾಳ ಹಾಗೂ ಸಾವಿರಾರು ಎಕರೆ ಕೃಷಿ ಜಮೀನನ್ನು ಕೈಗಾರಿ ಕೋದ್ಯಮಿಗಳಿಗೆ ನೀಡುತ್ತಾ ಹಸಿರು ಅರಣ್ಯ ವಲಯವನ್ನು ನಾಶಪಡಿಸಲಾಗುತ್ತಿದೆ. ರೈತರು ಶ್ರೀಮಂತರಿಗೆ ಜಮೀನು ಮಾರಿಕೊಳ್ಲಕುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬಡತನಕ್ಕೆ ಕಾರಣವಾಗಿದೆ.
ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಲಾಗುತ್ತಿಲ್ಲ. ಹೆಜ್ಜೆಹೆಜ್ಜೆಗೂ ಟೋಲ್ ತೆರಿಗೆ ಹಾವಳಿ ವಿಪರೀತವಾಗಿದೆ. ಇದರಿಂದ ಜನರಿಗೆ ಮುಕ್ತಿ ದೊರೆಯಬೇಕು ಎಂದರು. ಸರ್ಕಾರಗಳು ವಿಧಿಸುತ್ತಿರುವ ತೆರಿಗೆ ಜನರನ್ನು ಇಂಚಿಂಚು ಕೊಲ್ಲುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬ ನಾಗರಿಕರ ಹಕ್ಕು. ಖಾಸಗೀಕರಣದಿಂದ ದೇಶ ವಿನಾಶದತ್ತ ಸಾಗುತ್ತಿದೆ ಎಂದು ಕಿಡಿಕಾರಿದರು.
ಜನತಾ ಪಾರ್ಟಿಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರಿದ್ದಾರೆ. ಪಕ್ಷಕ್ಕೆ ರಾಜಕೀಯಕ್ಕಿಂತ ದೇಶದ ಸಾಂಸ್ಕೃತಿಕ ಮಹತ್ವ, ನೈತಿಕತೆ ಮುಖ್ಯವಾಗಿದ್ದು ನಾವು ಅಧಿಕಾರದ ಬೆನ್ನುಹತ್ತಿ ಹೋಗುತ್ತಿಲ್ಲ ಭ್ರಷ್ಟಾಚಾರ ನಿರ್ಮೂಲನೆ, ರೈತರ ಹಿತ ಕಾಪಾಡುವುದು ನಮ್ಮ ಪಕ್ಷದ ಧ್ಯೇಯವಾಗಿದೆ ಎಂದರು. ರೈತರನ್ನು ಪಕ್ಷ ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದರು.
ಪಠ್ಯ ಪರಿಷ್ಕರಣೆ ಬೇಕಾಗಿಲ್ಲ. ಹೆಡಗೇವಾರ್ ಚಾರಿತ್ರಿಕ ನಾಯಕನೇನೋ ಅಲ್ಲ. ಅವರ ಭಾಷಣವನ್ನು ವಿದ್ಯಾರ್ಥಿಗಳು ಓದುವ ಅವಶ್ಯಕತೆ ಇಲ್ಲ. ಹೆಡಗೇವಾರ್ ಬಗ್ಗೆ ಮಕ್ಕಳಿಗೆ ಹೇಳುವಂತಹ ವಿಷಯಗಳೇನೂ ಇಲ್ಲ.
ಈಗಿದ್ದ ಪಠ್ಯದಲ್ಲಿ ಉತ್ತಮರ ಲೇಖನಗಳನ್ನು ತೆಗೆದಿದ್ದಾರೆ.ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಪಠ್ಯ ತೆಗೆಯಬೇಕು. ಈ ಸಂಬಂಧ ಇದೇ ಮೇ 31 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಜನತಾ ಪಾರ್ಟಿಯ ರೈತ ವಿಭಾಗದ ನೂತನ ರಾಜ್ಯಾಧ್ಯಕ್ಷರಾಗಿ ಭೈರೇಗೌಡರನ್ನು ನೇಮಿಸಿ ಅವರಿಗೆ ಅಧಿಕಾರ ಪತ್ರ ಹಸ್ತಾಂತರಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಜನತಾ ಪಾರ್ಟಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್, ಪ್ರಧಾನ ಕಾರ್ಯದರ್ಶಿ ಟಿ.ಸಿ.ರಾಜೇಂದ್ರ, ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಅಬ್ದುಲ್ ರೌಫ್, ರಾಮನಗರ ಜಿಲ್ಲಾಧ್ಯಕ್ಷ ಮಾದೇಗೌಡ,ಮಂಡ್ಯ ಜಿಲ್ಲಾಧ್ಯಕ್ಷ ಹರಳಹಳ್ಳಿ ಮಹಾದೇವಸ್ವಾಮಿ,ಕೆ.ಎಂ.ಫಾಲಾಕ್ಷ ಉಪಸ್ಥಿತರಿದ್ದರು.