ರೈತರು,ಕಾರ್ಮಿಕರ ಹೆಸರು ಹೇಳಿಕೊಂಡು ಮೋಸ ಮಾಡುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ತಾನೊಬ್ಬ ರೈತ ನಾಯಕ ಎಂದು ಹೇಳಿಕೊಳ್ಳುವ ಕೋಡಿಹಳ್ಳಿ ಚಂದ್ರಶೇಖರ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸಿದ್ದ ಮುಷ್ಕರ ಕೈ ಬಿಡಲು ಸರ್ಕಾರದಿಂದ 35 ಕೋಟಿ ಕೊಡುವಂತೆ ಬೇಡಿಕೆ ಇಟ್ಟಿದ್ದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದು ಈತನ ಭ್ರಷ್ಟಚಾರಕ್ಕೆ ಸಾಕ್ಷಿಯಾಗಿದೆ.
ಈ ಕೂಡಲೇ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಾನೂನು ತನಿಖೆಯಾಗಬೇಕು. ಜೊತೆಗೆ ಅವರು ಅಕ್ರಮವಾಗಿ ಸಂಪಾದಿ ಸಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯ ಮಾಡಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನೆ ವಿಚಾರದಲ್ಲೂ ಇವರು ಹಣ ನೀಡುವಂತೆ ಒತ್ತಾಯಿಸಿದ್ದು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಿ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಕೋಶಾಧ್ಯಕ್ಷ ರವಿಕುಮಾರ್, ಶಂಕರ್, ವಿಜಯ್ ಕುಮಾರ್, ಚಂದ್ರ ಶಿವಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.