Sunday, March 3, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬಿದ ಭಾರತ್ ಜೋಡೋ ಯಾತ್ರೆ


  • ಯಾತ್ರೆಗೆ ಶಕ್ತಿ ತುಂಬಿದ ಸೋನಿಯಾಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್

  • ಯುವ ನಾಯಕ ರಾಹುಲ್ ಗಾಂಧಿಯ ಸರಳತೆಗೆ ಮಾರುಹೋದ ಜನತೆ
  • ಮಂಡ್ಯ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರ ಸ್ಪಂದನೆ 

✍🏿 ನಾಗೇಶ್ ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಾಗಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಹರಿದು ಬಂದ ಜನಸಾಗರ ಕಂಡು ಜಿಲ್ಲಾ ಕಾಂಗ್ರೆಸ್ ನಾಯಕರು ಪುಳಕಿತರಾಗಿದ್ದಾರೆ.

ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ತಾಲ್ಲೂಕಿನಲ್ಲಿ ಸಾಗಿದ ಪಾದಯಾತ್ರೆಗೆ ಜನರ ಅಭೂತಪೂರ್ವ ಸ್ಪಂದನೆ ಕಂಡು ಜಿಲ್ಲಾ ಕಾಂಗ್ರೆಸ್ ನಾಯಕರು ತಾವೂ ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ. ಒಟ್ಟಾರೆ ರಾಹುಲ್ ಗಾಂಧಿಯವರ ಐಕ್ಯತಾ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದೆ ಎಂದರೆ ತಪ್ಪಾಗಲಾರದು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ದಯನೀಯವಾಗಿ ಸೋಲು ಕಂಡಿತ್ತು. ಕಾಂಗ್ರೆಸ್ ಮತ ಬ್ಯಾಂಕ್ ನೆಲಕಚ್ಚಿ ಜೆಡಿಎಸ್ ಏಳು ಕ್ಷೇತ್ರಗಳಲ್ಲಿ ವಿಜಯದ ಪತಾಕೆ ಹಾರಿಸಿತ್ತು. ಇದರಿಂದ ಮಂಕಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಎರಡು ವಿಧಾನ ಪರಿಷತ್ ಸದಸ್ಯ ಸ್ಥಾನಗಳು ಸಿಕ್ಕಿ ಸ್ವಲ್ಪ ಚೇತರಿಕೆ ಕಂಡಿತ್ತು.

ಈಗ ರಾಹುಲ್ ಗಾಂಧಿಯವರ ಮೂರು ದಿನದ ಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಪಾಲ್ಗೊಂಡರು. ಇದರ ಹಿಂದೆ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ಸಿಗರು ಐಕ್ಯಗೊಂಡು ಮಾಡಿದ ಭಾರತ್ ಐಕ್ಯತಾ ಯಾತ್ರೆಗೆ ಭರ್ಜರಿ ಯಶಸ್ಸು ಸಿಕ್ಕಿದೆ.

ಭಾರತ್ ಜೋಡೋ ಯಾತ್ರೆ ಒಂದೇ ಜಿಲ್ಲಾ ಕಾಂಗ್ರೆಸ್ ವರ್ಚಸ್ಸು ವೃದ್ಧಿಸಿದ್ದರೆ, ಮತ್ತೊಂದೆಡೆ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೊಸ ಸಂಭ್ರಮ ತಂದಿದೆ.

ಭರವಸೆಯ ನಾಯಕ

ಜಿಲ್ಲೆಯಲ್ಲಿ ಪಾದಯಾತ್ರೆ ಸಾಗಿದ ಮೂರು ದಿನವೂ ರಾಹುಲ್ ಗಾಂಧಿಯವರು ಜಿಲ್ಲೆಯ ಜನಸಾಮಾನ್ಯರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿ, ಚರ್ಚಿಸಿರುವುದು ರಾಹುಲ್ ಗಾಂಧಿಯವರ ಬಗ್ಗೆ ಜಿಲ್ಲೆಯ ಜನರಲ್ಲಿ ಅಪಾರವಾದ ಭರವಸೆ ಮೂಡಿಸಿದೆ.

ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಇವರ ಬಗ್ಗೆ ಪಾದಯಾತ್ರೆ ಉದ್ದಕ್ಕೂ ಆಡಿದ ಮಾತುಗಳು, ನಡೆಸಿದ ಸಂವಾದಗಳು ನೋಡಿ ರಾಹುಲ್ ಅವರಲ್ಲಿ ಭರವಸೆಯ ನಾಯಕನನ್ನು ಕಂಡುಕೊಂಡಿದ್ದಾರೆ.  ನಾಗಮಂಗಲದ ಚೌಡಗೋನಹಳ್ಳಿಯಲ್ಲಿ ರೈತರೊಂದಿಗೆ ನಡೆಸಿದ ಸಂವಾದದಲ್ಲಿ ಹಲವು ಗುರುತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಕೃಷಿ ಕ್ಷೇತ್ರದಲ್ಲಿ ರೈತರನ್ನು ಕಾಡುತ್ತಿರುವ ಸಮಸ್ಯೆಗಳು, ಅದಕ್ಕೆ ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಚರ್ಚೆ ನಡೆಸಿದರು. ಆತ್ಮಹತ್ಯೆಗೆ ಶರಣಾದ ರೈತ ಕುಟುಂಬ ದೊಂದಿಗೆ, ಹೈನುಗಾರಿಕೆ ಕ್ಷೇತ್ರದಲ್ಲಿ ಆಗುತ್ತಿರುವ ಸಮಸ್ಯೆಗಳು, ರೈತರ ಆತ್ಮಹತ್ಯೆಗೆ ಕಾರಣಗಳು, ಬೆಲೆಯೇರಿಕೆ, ರೈತ ಉತ್ಪನ್ನಗಳ ಬೆಂಬಲ ಬೆಲೆ ಸಿಗದಿರುವ ಕುರಿತು ನಡೆಸಿದ ಸಂವಾದ ರಾಜ್ಯದ ಗಮನವನ್ನು ಸೆಳೆಯಿತು.

ಹಾಗೆ ನಾಗಮಂಗಲದ ಅಂಚೆ ಚಿಟ್ಟನಹಳ್ಳಿ ಬಳಿ ನಡೆದ ಸಂವಾದದಲ್ಲಿ ನೂತನ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಣ ತಜ್ಞರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೋಷಕರೊಂದಿಗೆ ನಡೆಸಿದ ಹೊಸ ಶಿಕ್ಷಣ ನೀತಿಯ ಬಗ್ಗೆ ನಡೆಸಿದ ಸಂವಾದದಲ್ಲಿ ಶಿಕ್ಷಣದ ಕೇಸರೀಕರಣ, ಹೊಸ ಶಿಕ್ಷಣ ನೀತಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಿರುವುದು ಜನತೆಯಲ್ಲಿ ರಾಹುಲ್ ರವರಲ್ಲಿ ಗಟ್ಟಿಯಾದ ನಾಯಕತ್ಬ ಇರುವುದನ್ನು ಸಾಬೀತು ಮಾಡಿದವು.

ಇನ್ನು ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಯ ಸರಳತೆ ಜನರ ಮನಸ್ಸು ಗೆದ್ದಿತು. ಈ ದೇಶಕ್ಕೆ ಮೂವರು ಪ್ರಧಾನಮಂತ್ರಿಗಳ ನೀಡಿದ ಮನೆತನದ ರಾಹುಲ್ ಗಾಂಧಿ ಅವರು ಎಲ್ಲರೊಂದಿಗೆ ಮುಕ್ತವಾಗಿ ಬೆರೆತರು. ಮಹಿಳೆಯರು, ಮಕ್ಕಳು, ವೃದ್ಧರು, ಅಂಗವಿಕಲರು ಎಲ್ಲರನ್ನೂ ಬಾಚಿ ತಬ್ಬಿಕೊಂಡು ಅವರಲ್ಲಿ ಆತ್ಮೀಯ ಭಾವ ಮೂಡಿಸಿದ ರಾಹುಲ್ ಗಾಂಧಿಯ ನೋಡಲು ಗಂಟಗಟ್ಟಲೆ ಜಿಲ್ಲೆಯ ಜನರು ಕಾದು ನಿಂತು ಕಣ್ತುಂಬಿ ಕೊಂಡರು.

ಪಾದಯಾತ್ರೆ ನಾಗಮಂಗಲಕ್ಕೆ ಬಂದಾಗ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಮಗನ ಜೊತೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ತಾಯಿಯ ಶೂ ಲೇಸ್ ಕಟ್ಟಿದ್ದು, ಜನರಲ್ಲಿ ಅವರ ಬಗ್ಗೆ ಅಭಿಮಾನ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಕಬ್ಬು ತಿನ್ನುತ್ತಾ, ಮಕ್ಕಳು ಕೊಟ್ಟ ಬಿಸ್ಕೆಟ್ ತಿನ್ನುತ್ತಾ, ಮಕ್ಕಳಿಗೆ ಚಾಕೊಲೇಟ್ ಕೊಡುವ ರಾಹುಲ್ ಗಾಂಧಿಯ ನಡೆ ಜನರಿಗೆ ಮತ್ತಷ್ಟೂ ಆಪ್ತವಾಯಿತು. ಇವರು ಜನಸಾಮಾನ್ಯರ ಜೊತೆ ಬೆರೆಯುವ ನಾಯಕ ಎಂಬ ಇಮೇಜು ತಂದುಕೊಟ್ಟಿತು.

ವರ್ಚಸ್ಸು ವೃದ್ಧಿ

ಆಡಳಿರೂಢ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ, ಭ್ರಷ್ಟಾಚಾರ, ರೈತ-ಜನ ವಿರೋಧಿ ನೀತಿಗಳು, ನೋಟ್ ಬ್ಯಾನ್, ಜಿಎಸ್ಟಿ, ಪೆಟ್ರೋಲ್, ಗ್ಯಾಸ್ ದಿನಬಳಕೆಯ ವಸ್ತುಗಳ ಬೆಲೆಯೇರಿಕೆ ಮೊದಲಾದವುಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟಿರುವುದು ಜನರಲ್ಲಿ ಚಿಂತನೆಗೆ ಹಚ್ಚಿದೆ. ಹಲವೆಡೆ ಪತ್ರಿಕಾಗೋಷ್ಟಿ ಮೂಲಕ ಬಡತನದ ಭಾರತ ಮತ್ತು ಶ್ರೀಮಂತರ ಭಾರತ ಬಗ್ಗೆ ಜನರ ಗಮನ ಸೆಳೆದಿದ್ದಾರೆ.

ಪ್ರಧಾನಿಯಾಗಿ ಎಂಟು ವರ್ಷವಾದರೂ ಜನರ, ಮಾಧ್ಯಮಗಳ ಮುಂದೆ ಬರದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಮೂಲಕ ಜನರಲ್ಲಿ ಪ್ರಶ್ನೆ ಹುಟ್ಟು ಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಒಳ್ಳೆಯದು ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ.
ಇವೆಲ್ಲಾ ಜಿಲ್ಲೆಯ ಜನರಲ್ಲಿ ಕಾಂಗ್ರೆಸ್ ಬಗ್ಗೆ ಬಲವಾದ ಅಭಿಪ್ರಾಯ ಮೂಡಿಸಿ, ವರ್ಚಸ್ಸು ವೃದ್ಧಿಸಲಿದೆ ಎನ್ನುವ ಆಶಾವಾದ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ದಿನೇಶ್ ಗೂಳೀಗೌಡ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರದ್ದಾಗಿದೆ.

ಬಿಜೆಪಿಗೆ ಉರಿ

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ರಾಹುಲ್ ಗಾಂಧಿಯನ್ನು ಪಪ್ಪು,ಎಳಸು ಎಂದೆಲ್ಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿ ಜನರ ಮನಸ್ಸಿನಲ್ಲಿ ಅವರ ಬಗ್ಗೆ ಬೇರೊಂದು ಅಭಿಪ್ರಾಯವನ್ನು ಮೂಡಿಸಿದ್ದವು. ಆದರೆ ರಾಹುಲ್ ಗಾಂಧಿಯವರು ವಿಪಕ್ಷಗಳು ಹಾಗೂ ಮಾಧ್ಯಮದ ನಿರ್ಲಜ್ಜತನ ವಿರೋಧಿಸಿ ಜನರ ಕಷ್ಟ-ಸುಖಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ನಾನೇ ಅವರ ಬಳಿ ಹೋಗಿ ಮಾತನಾಡುತ್ತೇನೆ ಎಂದಾಗ ರೂಪಿತವಾದದ್ದೇ ಭಾರತ್ ಜೋಡೋ ಯಾತ್ರೆ.

ಈ ಹಿಂದೆ ದೇಶದ ಹಲವು ನಾಯಕರು ಪಾದಯಾತ್ರೆ ಮಾಡಿ ಯಶಸ್ಸು ಕಂಡಿದ್ದರು. ಅದರಿಂದ ಪ್ರೇರಣೆ ಪಡೆದು ರಾಹುಲ್ ಗಾಂಧಿಯವರು ಕೂಡ ಈ ದೇಶದಲ್ಲಿ ನಡೆಯುತ್ತಿರುವ ಕೋಮುವಾದ ಕೊನೆಗೊಳಿಸಿ ಎಲ್ಲಾ ಧರ್ಮದ ಜನರನ್ನು ಒಂದು ಗೂಡಿಸಲು ಹೊರಟಿದ್ದು, ಬಿಜೆಪಿಗೆ ಉರಿ ಹತ್ತಿಸಿದೆ. ಬಿಜೆಪಿ ನಾಯಕರು ಪಾದಯಾತ್ರೆಗೆ ರಾಜ್ಯದ ಜನರು ತೋರುತ್ತಿರುವ ಬೆಂಬಲ ಕಂಡು ರಾಹುಲ್ ಗಾಂಧಿಯ ವಿರುದ್ಧ ಕ್ಷುಲ್ಲಕವಾಗಿ ಮಾತನಾಡುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ.

ಕನ್ನಡ ಪ್ರಭ, ವಿಶ್ವವಾಣಿ, ಹೊಸ ದಿಗಂತ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ರಾಹುಲ್ ಗಾಂಧಿಯವರ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಜನರ ಮುಂದೆ ರಾಹುಲ್ ಗಾಂಧಿ ವ್ಯಕ್ತಿತ್ವ ಕುಬ್ಜವಾಗುವುದಿಲ್ಲ. ಬದಲಿಗೆ ಅವರ ವ್ಯಕ್ತಿತ್ವ ಇನ್ನೂ ಹೆಚ್ಚಾಗುತ್ತದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತ್ರ ರೂಪಿಸಿ, ಪೋಸ್ಟರ್ ಹಾಕಿಸುವ ಮೂಲಕ ಬಿಜೆಪಿ ತನ್ನ ಕೆಟ್ಟ ಛಾಳಿಯನ್ನ ಜನರ ಮುಂದೆ ಪ್ರದರ್ಶನ ಮಾಡಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ.

ಯಾತ್ರೆಯಿಂದ ಸಂಚಲನ

ಭಾರತ್ ಜೋಡೋ ಯಾತ್ರೆ ಜಿಲ್ಲೆಯಲ್ಲಷ್ಟೇ ಅಲ್ಲದೆ ರಾಜ್ಯ ಕಾಂಗ್ರೆಸ್‌ನಲ್ಲೇ ಭಾರೀ ಸಂಚಲನ ಮೂಡಿಸಿದೆ. ಅಲ್ಲದೆ ಬೇರೆ ಪಕ್ಷಗಳಿಗೂ ತಲೆನೋವು ತಂದಿದೆ. ಜಿಲ್ಲೆಯಲ್ಲಿ ಯಾತ್ರೆಗೆ ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರಿರಲಿಲ್ಲ. ಆದರೆ ಉಳಿದೆರಡು ದಿನ 40 ರಿಂದ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹೆಜ್ಜೆ ಹಾಕಿದರು.

ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ದಿನೇಶ್ ಗೂಳೀಗೌಡ, ರಮೇಶ್ ಬಾಬು ಬಂಡಿಸಿದ್ದೇಗೌಡ, ವಿಜಯ್ ರಾಮೇಗೌಡ, ಜಿಲ್ಲಾಧ್ಯಕ್ಷ ಗಂಗಾಧರ್ ಮೊದಲಾದ ಮುಖಂಡರು ಜಿಲ್ಲೆಯಲ್ಲಿ ಪಾದಯಾತ್ರೆ ಯಶಸ್ವಿಯಾಗುವಂತೆ ಮಾಡಿದ್ದಾರೆ.

ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯು ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಚೈತನ್ಯ ಮೂಡಿಸಿದೆ. ಜೊತೆಗೆ ಪಕ್ಷದ ಸಂಘಟನೆ ಚುರುಕುಗೊಳಿಸಿದೆ. ಮುಂದಿನ ಚುನಾವಣೆಯಲ್ಲಿ ಇದು ಎಷ್ಟರ ಮಟ್ಟಿಗೆ ಯಶಸ್ಸು ತರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!