ಪುತಿನ ರಚಿಸಿದ ಸಾಹಿತ್ಯಗಳಿಗೆ ಸಮಾಜವನ್ನು ಬದಲಿಸುವ ಶಕ್ತಿ ಇದೆ. ಭಾವನೆಗಳನ್ನು ಅರಳಿಸುವ ಹಾಗೂ ಕೆರಳಿಸುವ ಶಕ್ತಿಯಿದ್ದು, ಯುವ ಪೀಳಿಗೆ ಸಾಹಿತ್ಯಾಸಕ್ತರಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕರೆನೀಡಿದರು.
ಇಲ್ಲಿನ ಪುತಿನ ಕಲಾಮಂದಿರದಲ್ಲಿ ಸೋಮವಾರ ರಾತ್ರಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪುತಿನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪುತಿನ ಪುಣ್ಯಸ್ಮರಣೆ ಹಾಗೂ ಕಾಲೇಜುಗಳಲ್ಲಿ ಡಾ ಪುತಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿ, ನಮ್ಮ ಜಿಲ್ಲೆ ನೆಲೆ, ಜಲ ಸಂಸ್ಕೃತಿಗೆ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ವಾಸಿಯಾಗಿದೆ. ಪುತಿನ, ಕೆಎಸ್ ನರಸಿಂಹ ಸ್ವಾಮಿ ಸೇರಿದಂತೆ ಅನೇಕ ದಿಗ್ಗಜರು ನೀಡಿರುವ ಕೊಡುಗೆ ಅಪಾರವಾಗಿದೆ.ಸಾಹಿತಿಗಳಿಲ್ಲದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಹಿತ್ಯ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಲೇಖನ ಹಾಗೂ ಕೃತಿಗಳ ಮೂಲಕ ಜನರಿಗೆ ತಿಳಿಸುವ ಕಾರ್ಯವನ್ನು ಸಾಹಿತಿಗಳು ಮಾಡುತ್ತಿದ್ದಾರೆ. ಸಾಹಿತಿಗಳಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ’ ಪುತಿನ ಮತ್ತು ದಾ. ರ ಬೇಂದ್ರೆ , ಕುವೆಂಪು ರವರ ಸಾಹಿತ್ಯಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದ ಉಳಿವಿಗೆ ಯುವ ಸಮುದಾಯ ಪಾತ್ರ ಬಹುಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಪುತಿನ ಟ್ರಸ್ಟ್ ಹಾಗೂ ಕೆ ಎಸ್ ನರಸಿಂಹಸ್ವಾಮಿ ಟ್ರಸ್ಟ್ ಗಳ ಸಮಗ್ರ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಪುತಿನ ಟ್ರಸ್ಟ್ ಅಧ್ಯಕ್ಷರಾದ ಪ್ರೋ ಕೃಷ್ಣೇಗೌಡ್ರು ಮಾತನಾಡಿ ಉತ್ತಮ ನಿರ್ಮಾಣಕ್ಕೆ ಸಮಾಜದಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಸಾರ್ವಜನಿಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಸಾಹಿತಿಗಳ ಪಾತ್ರವೂ ಅಷ್ಟೇ ಬಹುಮುಖ್ಯವಾಗಿದೆ ಎಂದರು.
ಸರ್ಕಾರ ಪುತಿನ ಮನೆ ಹಾಗೂ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಜತೆಗೆ ಹುಟ್ಟೂರು ಮೇಲುಕೋಟೆಯಲ್ಲಿ ಭವ್ಯವಾದ ಕಲಾಮಂದಿರ ನಿರ್ಮಿಸಿದ್ದಾರೆ. ಆದರೆ ಅವರ ಅಂತ್ಯಸಂಸ್ಕಾರ ಸ್ಥಳ ಕಸದತೊಟ್ಟಿಯಾಗಿದೆ. ಬಯಲು ಕಲಾಮಂದಿರಕ್ಕೆ ಮೇಲ್ಛಾವಣಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಮತ್ತು ಪುತಿನ ಕೃತಿ, ನಾಟಕಗಳನ್ನು ಆಡಿಯೋ ಹಾಗೂ ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ, ಡಾ ಮೀರಾಶಿವಲಿಂಗಯ್ಯ, ಕೈಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್ ತ್ಯಾಗರಾಜು, ಗ್ರಾ. ಪಂ ಅಧ್ಯಕ್ಷೆ ಭವಾನಿ ಹರಧರ್, ಉಪವಿಭಾಗಧಿಕಾರಿ ಶ್ರೀನಿವಾಸ್, ಕಸಾಪ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಮೇನಾಗ್ರ , ನಂದೀಶ್ ಪಾಲ್ಗೊಂಡಿದರು.




