Thursday, September 19, 2024

ಪ್ರಾಯೋಗಿಕ ಆವೃತ್ತಿ

ವೈದ್ಯರ ಸೇವೆ ಸಾರ್ವಜನಿಕ ಸ್ನೇಹಿಯಾಗಿರಲಿ – ಚಲುವರಾಯಸ್ವಾಮಿ

ಸಮಾಜದ ಹಲವು ವೃತ್ತಿಗಳ ಪೈಕಿ ಸೇವಾ ದೃಷ್ಠಿಯನ್ನು ಬಿಂಬಿಸುವ ವೈದ್ಯರ ಸೇವೆ ಸಾರ್ವಜನಿಕರ ಮೆಚ್ಚಗೆಗೆ ಪಾತ್ರವಾಗುವಂತೆ ಜನ ಸ್ನೇಹಿಯಾಗಿರಲಿ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ನಗರದ ಮಿಮ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಹೃದಯ ವೈಶಾಲ್ಯ ಯೋಜನೆಯಡಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ವಿತರಿಸಿ ಮಾತನಾಡಿದರು.

ಜಿಲ್ಲೆಯ 155 ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ ಇಂದು 35 ಆರೋಗ್ಯ ಕೇಂದ್ರಗಳಿಗೆ ಕಾರ್ಡಿಯಾಲಜಿ ಡೋರ್ ಸ್ಟೇಪ್ ಫೌಂಡೇಷನ್ (ಸಿಎಡಿ) ನೀಡಿರುವ ಇಸಿಜಿ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯ ಜನರ ಆರೋಗ್ಯ ತಪಾಸಣೆಗೆ ನೆರವಾಗುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಕುಮಾರ್ ಅವರ ಕಾಳಜಿಯಿಂದ ಮಂಗಳೂರಿನ ಮಣಿಪಾಲ ಸಂಸ್ಥೆಯ ಡಾ.ಪ್ರಮೋದ್ ಕಾಮತ್ ಅವರು ಉಚಿತವಾಗಿ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ್ದು, ಎರಡನೇ ಹಂತದಲ್ಲಿ ಎಲ್ಲ ಆರೋಗ್ಯ ಕೇಂದ್ರಗಳಿಗೂ ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದ ಆರೋಗ್ಯ ಸೇವೆಗಳನ್ನು ಸದೃಢಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದ್ದು, ಈ ನಿಟ್ಟಿನಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದ ವೈದ್ಯಕೀಯ ಸಲಕರಣೆಗಳನ್ನು ಡಾ.ಕಾಮತ್ ಅವರು ಉಚಿತವಾಗಿ ನೀಡಿರುವುದು ಶ್ಲಾಘನೀಯ ಎಂದರು.

ಒತ್ತಡದ ಜೀವನ ಶೈಲಿಗೆ ಮಾರು ಹೋಗಿರುವ ಮನುಷ್ಯನಿಗೆ ತುರ್ತು ಸಂದರ್ಭದಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಿ ಸಾವು- ನೋವಿನ ಪ್ರಮಾಣವನ್ನು ಕಡಿಮೆ ಮಾಡಿ, ಜೀವ ಉಳಿಸಲು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ನೆರವಾಗಬೇಕೆಂದರು.

ಜಿಲ್ಲಾ ಕೇಂದ್ರದ ಮಿಮ್ಸ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಆರೋಗ್ಯ ಸೇವೆಗಳು ಸಕಾಲದಲ್ಲಿ ಜನಸಾಮಾನ್ಯರಿಗೆ ದೊರೆಯಬೇಕು, ವೈದ್ಯರು ರೋಗಿಗಳನ್ನು ತಾಳ್ಮೆಯಿಂದ ತಪಾಸಣೆ ಮಾಡಿ, ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು, ಆ ಮೂಲಕ ಸರ್ಕಾರ ಯೋಜನೆಗಳ ಫಲ ಜನ ಸಾಮಾನ್ಯರಿಗೆ ತಲುಪಬೇಕೆಂದರು.

ಪ್ರಮೋದ್ ಕಾಮತ್ ಅವರ ಕೊಡುಗೆಯನ್ನು ಶ್ಲಾಘಿಸಿದ ಸಚಿವರು, ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಮುಂದಾಗಿರುವ ಕಾಮತ್ ಅವರ ಸೇವೆಗೆ ಋಣಿಯಾಗಿ ಉತ್ತಮ ರೀತಿಯಲ್ಲಿ ರೋಗಿಗಳನ್ನು ಉಪಚರಿಸಲು ಮುಂದಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಡಿಯಾಲಜಿ ಡೋರ್ ಸ್ಟೇಪ್ ಫೌಂಡೇಷನ್ (ಸಿಎಡಿ) ಸಿಇಓ ಡಾ.ಪ್ರಮೋದ್ ಕಾಮತ್, ಶಾಸಕರಾದ ರಮೇಶ್ ಬಾಬು, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿ.ಪಂ.ಸಿಇಓ ಶೇಖ್ ತನ್ವೀರ್ ಆಸೀಫ್, ಎಸ್ಪಿ ಎನ್.ಯತೀಶ್, ಡಿ.ಎಚ್.ಓ ಡಾ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!