ಕೇಂದ್ರ ಹಾಗೂ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ಲೂಟಿಗೆ ಕಾರಣವಾಗಿದ್ದು, ಹಲವಾರು ಪ್ರಕರಣಗಳಲ್ಲಿ ಶೇ.100 ರಷ್ಟು ಭ್ರಷ್ಟಾಚಾರವೆಸಗಿದೆ. ಸಾಮಾನ್ಯ ಜನರ ಬದುಕು ದುಸ್ಥರವಾಗಿದ್ದು, ಇಂತಹ ಕರಾಳ ಆಡಳಿತ ಅಂತ್ಯವಾಗಬೇಕಾದರೆ, ಜಿಲ್ಲೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ ಪರ ಮತಯಾಚಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆ ರಾಜಕೀಯ ಪ್ರಜ್ಞಾವಂತರ ಜಿಲ್ಲೆಯಾಗಿದೆ, 2018ರ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಸೋಲಿನಿಂದ ಕಾಂಗ್ರೆಸಿಗರಾದ ನಾವೆಲ್ಲ ಹತಾಶರಾಗಿದ್ದು ನಿಜ. ಜಿಲ್ಲೆಯಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸಿ ನಾವು ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಾಗಿತ್ತು. ಆದರೆ ಅಧಿಕಾರ ಪಡೆದ 7 ಜನ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ದಿ ಆಸಕ್ತಿ ತಾಳಲಿಲ್ಲ, ಮೈಷುಗರ್ ಉನ್ನತಿಗೆ ಶ್ರಮಿಸಲಿಲ್ಲ ಎಂದು ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಶೇ.40ರಷ್ಟು ಭ್ರಷ್ಟಾಚಾರವೆಸಗುತ್ತಿದೆ ಎಂದು ನಾವೆಲ್ಲ ತಿಳಿದಿದ್ದೇವು, ಆದರೆ ಹಲವಾರು ನಿಗಮಗಳಲ್ಲಿ ನಯಾಪೈಸೆ ಕೆಲಸ ಮಾಡದೇ ಶೇ.100 ರಷ್ಟು ಭ್ರಷ್ಟಾಚಾರವೆಸಗಿರುವ ಮಾಹಿತಿ ವ್ಯಕ್ತವಾಗಿದೆ ಎಂದರು.
ಇಂತಹ ಕರಾಳ ಆಡಳಿತವನ್ನು ಕೊನೆಗಾಣಿಸಲು ಜಿಲ್ಲೆಯ ಜನತೆ ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು. ಮಂಡ್ಯ ಜಿಲ್ಲೆಯ ಮತ ಪಡೆದು ಉನ್ನತ ಅಧಿಕಾರ ಪಡೆದ ಜನ ಹಾಸನದಂತೆ ಮಂಡ್ಯವನ್ನು ಅಭಿವೃದ್ದಿ ಮಾಡಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.
ಹಲವು ವಿಚಾರಗಳ ತುಲನೆಯಿಂದ ಮಂಡ್ಯ ಅಭಿವೃದ್ಧಿ ಜೆಡಿಎಸ್ ಮತ್ತು ಬಿಜೆಪಿಯಿಂದ ಸಾಧ್ಯವಿಲ್ಲ ಎಂಬುದನ್ನು ಮತದಾರರು ತೀರ್ಮಾನಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಆಕಾಂಕ್ಷಿತರಾಗಿದ್ದ 6 ಮಂದಿ ಅನಿವಾರ್ಯ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಬದ್ಧರಾಗಿ ಅನ್ಯ ಪಕ್ಷದಿಂದ ‘ಕೈ’ ಪಾಳಯಕ್ಕೆ ಬಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಅಭ್ಯರ್ಥಿ ಗಣಿಗ ರವಿಕುಮಾರ್ ಮಾತನಾಡಿ, ಕ್ಷೇತ್ರದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರ ಒಕ್ಕೊರಲ ಧ್ವನಿಯಾಗಿ ನಾನು ಅಭ್ಯರ್ಥಿಯಾಗಿದ್ದೇನೆ, ಕಳೆದ 15 ವರ್ಷದಿಂದ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿ, ಬೀದಿ ಹಾಗೂ ನಿಮ್ಮೆಲ್ಲರ ಮನೆಗಳಿಗೆ ನೀವು ಕರೆದಾಗ ಪ್ರವಾಸ ಮಾಡಿದ್ದೇನೆ, ನಾನು ಇದೇ ಮಣ್ಣಿನ ಕುಗ್ರಾಮದವನು, ನಾನು ಸತ್ತ ಮೇಲೆ ಇದೇ ಮಣ್ಣಿನಲ್ಲಿ ನನ್ನನ್ನು ಹೂಳುತ್ತಾರೆ. ಆ ಸ್ವಾಭಿಮಾನಕ್ಕಾಗಿ ನನ್ನನ್ನು ಚುನಾಯಿಸಬೇಕೆಂದು ಮನವಿ ಮಾಡಿದರು.
ಕೊರೋನಾ ಸಂಕಷ್ಟ, ಅತಿವೃಷ್ಠಿ ಹಾವಳಿ ಸೇರಿದಂತೆ ಜನರ ಸಂಕಷ್ಟದಲ್ಲಿ ನನ್ನ ಕೈಲಾದ ಸೇವೆ ಮಾಡಿದ್ದೇನೆ, ನನ್ನನ್ನು ಚುನಾಯಿಸಿದರೆ ಶಾಸಕನಾಗಿ ಸೇವೆ ಮಾಡುವುದಿಲ್ಲ, ನಿಮ್ಮ ಸೇವಕನಾಗಿ ಸೇವೆ ಮಾಡುತ್ತೇನೆ ಎಂದರು.




