Friday, November 20, 2026

ಪ್ರಾಯೋಗಿಕ ಆವೃತ್ತಿ

ಜಗದ ಮೂಲೆಮೂಲೆಗೂ ಕನ್ನಡದ ವಾಣಿ ಹರಡಲಿ ; ಚಲುವರಾಯಸ್ವಾಮಿ

ಜಗದ ಮೂಲೆಮೂಲೆಗೂ ಕನ್ನಡದ ವಾಣಿ ಹರಡಲಿ. ಕನ್ನಡ ಭಾಷೆಯನ್ನು ಪ್ರೇಮಿಸಬೇಕು. ನೆಲ, ಜಲದ ಉಳಿವಿಗಾಗಿ ಒಟ್ಟಾಗಿ ನಿಲ್ಲಬೇಕು. ಎಲ್ಲೇ ಇದ್ದರು ಕನ್ನಡಿಗರಾಗಿ ನಾಡಿನ ಏಳಿಗೆಗೆ ಶ್ರಮಿಸೋಣ ಎಂದುಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡು ಸಾವಿರ ವರ್ಷಕ್ಕಿಂತ ಹೆಚ್ಚು ಇತಿಹಾಸವಿರುವ ಕನ್ನಡ ಭಾಷೆಗೆ ಸಾಕಷ್ಟು ಇತಿಹಾಸವಿದೆ. ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆ ಎಂದರೆ ಅದು ನಮ್ಮ ಮಂಡ್ಯ. ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡಿರುವ ಮಂಡ್ಯ ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದೆ ಎಂದರು.

ಬಿ.ಎಂ.ಶ್ರೀಕಂಠಯ್ಯ, ಕೆ.ಎಸ್.ನರಸಿಂಹಸ್ವಾಮಿ, ಪು.ತಿ.ನರಸಿಂಹಾಚಾರ್, ಭಾಷಾತಜ್ಞ, ಸಂಶೋಧಕ ವೆಂಕಟಸುಬ್ಬಯ್ಯ, ಸೀತಾಸುತ, ಜಾನಪದ ತಜ್ಞ ಡಾ. ಎಚ್.ಎಲ್.ನಾಗೇಗೌಡರು, ಬೊಮ್ಮರಸೇಗೌಡ ಅವರಂತಹ ಅನೇಕ ಶ್ರೇಷ್ಠ ಸಾಹಿತಿಗಳನ್ನು ನಾಡಿಗೆ ಕೊಟ್ಟಿರುವ ಜಿಲ್ಲೆ ಮಂಡ್ಯ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದರು.

ಬಾಂಧವ್ಯ, ಸ್ನೇಹ ಪ್ರೀತಿಗೆ ಮಂಡ್ಯ ಹೆಸರುವಾಸಿ

ಅತಿಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಹೆಮ್ಮೆ. ದಿಟ್ಟತನ, ಔದಾರ್ಯ, ಆತಿಥ್ಯ, ಮತೀಯ ಬಾಂಧವ್ಯ, ಸ್ನೇಹ ಪ್ರೀತಿಗೆ ಮಂಡ್ಯ ಹೆಸರುವಾಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ನುಡಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ಸಾಹಿತ್ಯ ಸಮ್ಮೇಳನ ಇಲ್ಲಿ ನಡೆದಿದ್ದು ಇದು ಮೂರನೇ ಸಮ್ಮೇಳನ. ಕರ್ನಾಟಕ ಎಂದು ನಾಮಕರಣ ಆದ ನಂತರ ಮೊದಲ ಸಮ್ಮೇಳನ ನಡೆದಿದ್ದು ಮಂಡ್ಯದಲ್ಲಿ ಅನ್ನೋದು ಮತ್ತೊಂದು ವಿಶೇಷ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನ ಎಂದರೆ ನಾಡು, ನುಡಿ, ಸೊಬಗು ಸೂಸುವ ಸಂಭ್ರಮದ ಜಾತ್ರೆ. ಸಮಸ್ತ ಕನ್ನಡಿಗರು ಒಂದೆಡೆ ಸೇರಿ ಚರ್ಚಿಸುವ ವೇದಿಕೆ. ಕನ್ನಡ ನಾಡಿನ ಹಿರಿಮೆ ಎತ್ತಿಹಿಡಿಯುವ ಕೆಲಸ ಸಾಹಿತ್ಯ ಸಮ್ಮೇಳನದ ಮೂಲಕ ಮಾಡಬೇಕಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಕ್ಷೀಣಿಸುತ್ತಿರುವುದು ನಿಜಕ್ಕೂ ಬೇಸರ. ಕನ್ನಡ ಭಾಷೆ ಸಂಕಷ್ಟದಲ್ಲಿದೆ. ಮಕ್ಕಳಲ್ಲಿ ಕನ್ನಡ ಕಲಿಕೆ ಆಸಕ್ತಿ ಕುಸಿಯುತ್ತಿದೆ. ಇದಕ್ಕೆ ಕಾರಣ ಕನ್ನಡ ಅನ್ನದ ಭಾಷೆ ಆಗದಿರುವುದು. ಭಾಷೆ ಉಳಿದರೆ ಸಂಸ್ಕೃತಿ ಉಳಿದಂತೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ