Friday, November 20, 2026

ಪ್ರಾಯೋಗಿಕ ಆವೃತ್ತಿ

ಸುಗ್ರೀವಾಜ್ಞೆ ತಿರಸ್ಕಾರ| ರಾಜ್ಯಪಾಲರು ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ ; ಚಲುವರಾಯಸ್ವಾಮಿ

ರಾಜ್ಯದ ಬಡವರು, ಮಧ್ಯಮ ವರ್ಗದ ಜನತೆ ಮೈಕ್ರೋಫೈನಾನ್ಸ್ ಕಿರುಕುಳದಿಂದಾಗಿ ಆತ್ಮಹತ್ಯೆ ಹಾದಿ ಹಿಡಿದಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರ ರಕ್ಷಣೆಗೆ ಧಾವಿಸಿ, ಸುಗ್ರೀವಾಜ್ಞೆ ತಂದಿದೆ, ಆದರೆ ರಾಜ್ಯಪಾಲರು ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು, ನ್ಯಾಯ ಕೊಡುವ ಕೆಲಸ ರಾಜ್ಯಪಾಲರು ಮಾಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗೆ ಆದರೆ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬೇಸತ್ತವರೆಲ್ಲರೂ ಹೋಗಿ ಪ್ರತಿಭಟನೆ ಮಾಡುವ ಕಾಲ ಬರುತ್ತದೆ. ಸಾಲ ಕೊಟ್ಟಿದ್ದಾರೆಂದು ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಹಿಂಸಿಸಬಾರದು. ಬದಲಿಗೆ ನಿಯಮಾನುಸಾರ ಸಾಲ ವಸೂಲಾತಿ ಮಾಡಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಏನಾದರೂ ಅಭಿವೃದ್ಧಿ ಕೆಲಸ ಮಾಡಲಿ
ಆಂಧ್ರಪ್ರದೇಶ, ಬಿಹಾರಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಅನುದಾನ ಕೊಟ್ಟಿದ್ದಾರೆಯೇ ಹೊರತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯಲ್ಲ. ಟೀಕೆ ಮಾಡುವುದನ್ನು ಬಿಟ್ಟು ರಾಜ್ಯಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡಲಿ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊರರಾಜ್ಯದವರ ರೀತಿ ಕರ್ನಾಟಕ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಎಚ್‌ಡಿಕೆ ಹೇಳಿದ್ದಾರೆ. ನಾನು ಅರ್ಜಿ ಹಿಡಿದು ಅವರ ಮನೆ ಬಳಿ ನಿಲ್ಲಲು ಆಗುತ್ತಾ?. ರಾಷ್ಟ್ರೀಯ ಹೆದ್ದಾರಿ, ಫ್ಯಾಕ್ಟರಿ ಮಾಡಲು ಮಾಧ್ಯಮಗಳ ಮೂಲಕ ಹೇಳಿದ್ದೆ. ಅಭಿವೃದ್ಧಿ ಮಾಡಿ ಎಂದು ಈ ಜಿಲ್ಲೆ, ರಾಜ್ಯದ ಜನ ಗೆಲ್ಲಿಸಿಲ್ವಾ?. ನಾವು ಅರ್ಜಿ ಹಿಡಿದು ನಿಂತ್ಕೋಬೇಕಾ?. ಚಂದ್ರಬಾಬು ನಾಯ್ಡು, ನಿತೀಶ್‌ಕುಮಾರ್ ಸಹಕಾರದಿಂದ ಕೇಂದ್ರ ಸರ್ಕಾರ ಇದೆ. ಅವರ ಬೆಂಬಲ ಇಲ್ಲವೆಂದರೆ ನರೇಂದ್ರಮೋದಿ ಪ್ರಧಾನಿಯಾಗಿರಲ್ಲ. ಹಾಗಾಗಿ ಅವರ ರಾಜ್ಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ದೇವೇಗೌಡರ ಕುಟುಂಬ ಬಿಟ್ಟರೆ ಬೇರೆ ಯಾರು ಪ್ರಾಮಾಣಿಕರಲ್ಲ

ರಾಜ್ಯ ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ದೇವೇಗೌಡರ ಕುಟುಂಬ ಬಿಟ್ಟರೆ ಬೇರೆ ಯಾರು ಪ್ರಾಮಾಣಿಕರಲ್ಲ. ಈಗ ಕಾಂಗ್ರೆಸ್‌ನವರು ಮಾತ್ರ ಭ್ರಷ್ಟರು, ಬಿಜೆಪಿಯನ್ನ ಒಪ್ಪುತ್ತಾರೆ ಎನ್ನಿಸುತ್ತದೆ. ದೇವೇಗೌಡರಿಗೆ ಇನ್ನು ಹತ್ತಾರು ವರ್ಷ ಆಯಸ್ಸು ಸಿಗಲಿ. ಅವರು ನಮ್ಮನ್ನು ಹೀಗೆ ಟೀಕೆ ಮಾಡುತ್ತಿರಲಿ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಲು ಬಹಳಷ್ಟಿದೆ. ಇಳಿವಯಸ್ಸಿನಲ್ಲಿ ದೇವೇಗೌಡರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಅವರ ಜತೆಯಲ್ಲೇ ಇದ್ದು, ರಾಜಕಾರಣ ಮಾಡಿದವನು. ನನ್ನ ಜತೆ ಇದ್ದಾಗ ಅವರ ಮಕ್ಕಳಿಗೆ ದೇವೇಗೌಡರು ಏನು ಬುದ್ದಿ ಹೇಳಿದ್ದರೆಂದು ಗೊತ್ತಿದೆ. ನಾನು ಹವಾಯ್ ಚಪ್ಪಲಿ, ಪಂಚೆ ಹಾಕುತ್ತಿದೆ. ನೀವು ಹಾಗೇ ಇದ್ದೀರಾ ಎಂದು ಹೇಳುತ್ತಿದ್ದರು. ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ ಎಂದರು.

ಜಾಹೀರಾತು

ಮುಡಾ ಕೇಸ್ ರಾಜಕೀಯ ಪ್ರೇರಿತ

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ರಾಜಕೀಯ ಪ್ರೇರಿತ. ಲೋಕಾಯುಕ್ತ ತನಿಖೆ ಮಾಡುತ್ತಿದೆ. ಇನ್ನೊಂದು ತನಿಖೆಗೆ ಅರ್ಜಿ ಕೊಟ್ಟರೆ ನಿಲ್ಲಲ್ಲ. ಮುಡಾ ಕೇಸ್‌ನಲ್ಲಿ ಯಾವುದೇ ಸತ್ವ ಇಲ್ಲ. ನ್ಯಾಯ ಕೊಟ್ಟ ನ್ಯಾಯಾಲಯಕ್ಕೆ ಧನ್ಯವಾದ ಎಂದ ಸಚಿವ ಚಲುವರಾಯಸ್ವಾಮಿ, ರಾಜ್ಯಸರ್ಕಾರದ ಎಲ್ಲ ನಿರ್ಧಾರಗಳನ್ನು ರಾಜ್ಯಪಾಲರು ನಿರಾಕರಣೆ ಮಾಡುತ್ತಾರೆ. ಅನೇಕ ವಿಚಾರಗಳಿಗೆ ಅಂಕಿತ ಹಾಕದೆ ವರ್ಷಗಟ್ಟಲೇ ಬಾಕಿ ಉಳಿದಿದೆ. ಆದರೆ ಎಲ್ಲದಕ್ಕೂ ಮೊದಲು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. ಬಿಜೆಪಿ ಮತ್ತು ಜೆಡಿಎಸ್‌ನವರ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೇಳಿ ಹಾಗೇ ಉಳಿಸಿಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ