ಹನಿಯಂಬಾಡಿ ಜಗದೀಶ್
ಕಾವೇರಿ ಕೊಳ್ಳದ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಈಗಾಗಲೇ ಹಾರಂಗಿ ಅಣೆಕಟ್ಟೆ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ, ಇದರ ಬೆನ್ನಲ್ಲೇ ಕಾವೇರಿಯ ಉಪನದಿಯಾದ ಹೇಮಾವತಿ ನದಿಯು ಮೈದುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಅಣೆಕಟ್ಟೆಯು ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕೆ.ಆರ್.ಎಸ್ ಒಳಹರಿವು ಬುಧವಾರ (ಜೂ.18) ಬೆಳಿಗ್ಗೆ 8 ಗಂಟೆಯ ವೇಳೆಗೆ 29,368 ಕ್ಯೂಸೆಕ್ಸ್ ಗೆ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟವು 113.25 ಅಡಿಗೆ ಏರಿಕೆ ಕಂಡಿದೆ. ಕೆ.ಆರ್.ಎಸ್ ಭರ್ತಿಗೆ ಕೇವಲ 11 ಅಡಿಯಷ್ಟೇ ಬಾಕಿ ಉಳಿದಿದೆ.
ಕೆ.ಆರ್.ಎಸ್ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ : 124.80 ಅಡಿ
ಇಂದಿನ ನೀರಿನ ಮಟ್ಟ : 113.25 ಅಡಿ
ಗರಿಷ್ಟ ಸಂಗ್ರಹ ಸಾಮರ್ಥ್ಯ : 49.452 ಟಿ.ಎಂ.ಸಿ
ಇಂದಿನ ಸಂಗ್ರಹ 35.118 ಟಿ.ಎಂ.ಸಿ
ಒಳಹರಿವು : 29,368 ಕ್ಯೂಸೆಕ್ಸ್
ಹೊರ ಹರಿವು : 1,024 ಕ್ಯೂಸೆಕ್ಸ್
ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಉತ್ತಮ ಮಳೆಯಾಗುತ್ತಿದೆ, ಜೂ.ಬೆಳಿಗ್ಗೆ 6 ಗಂಟೆಗೆ 8276 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟವು 2922.00 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2909.25 ಅಡಿಗಳಿಗೆ ಮುಟ್ಟಿದೆ. ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಉತ್ತಮ ಮಳೆಯಾಗುತ್ತಿದ್ದು, ಆದ್ದರಿಂದ ಮುನ್ನೇಚರಿಕೆ ಕ್ರಮವಾಗಿ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ಪಾತ್ರ. ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು/ಸ್ಥಳೀಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ವಿನಂತಿಸಲಾಗಿದೆ. ಈ ಸಂಬಂಧ ನದಿಪಾತ್ರದ ವ್ಯಾಪ್ತಿಯಲ್ಲಿನ ಎಲ್ಲಾ ನೀರಾವರಿ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಕಂದಾಯ ಇಲಾಖೆಯ ಇತರೆ ಎಲ್ಲಾ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಂಡು, ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು, ಸ್ಥಳೀಯ ವಾಸಿಗಳಿಗೆ ಸೂಕ್ತ ತಿಳುವಳಿಕೆ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಪರಿಂಡೆಂಟಿಂಗ್ ಇಂಜಿನಿಯರ್ ಜ್ಯೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




