ಮಂಡ್ಯವನ್ನು ಜೆಡಿಎಸ್ ನಾಯಕರು ರಾಜಕೀಯವಾಗಿ ಉಪಯೋಗಿಸಿಕೊಳ್ಳಬಹುದು. ಆದರೆ ಮಂಡ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಹೆಚ್.ಡಿ.ರೇವಣ್ಣನಿಗೆ ಸಹಿಸಲು ಆಗಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ಮಂಡ್ಯದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾನಿಲಯ ಹಾಸನ ಜಿಲ್ಲೆಗೆ ಬರಬೇಕೆನ್ನುವುದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಸೆಯಾಗಿತ್ತು. ಆದರೆ ಕೃಷಿ ವಿವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯಕ್ಕೆ ನೀಡಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಹೇಗೆ ತಾನೇ ಸಹಿಸಿಕೊಳ್ಳುತ್ತಾರೆ ಎಂದರು.
ಮಂಡ್ಯಕ್ಕೆ ಬಂದಿದ್ದ ಐಐಟಿ ರಾಯಚೂರಿಗೆ ಹೋಯ್ತು
ಹಾಸನ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯೊಂದಿಗೆ ಸೇರ್ಪಡೆ ಮಾಡುವ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತನಾಡುವುದಕ್ಕೆ ಅವರಿಗೆ ಸ್ವಾತಂತ್ರ್ಯ ಹಾಗೂ ಹಕ್ಕಿದೆ. ಅವರಿಗೆ ಮಂಡ್ಯಕ್ಕೆ ಕೃಷಿ ವಿವಿ ಬಂದಿರುವುದು ಸಹಿಸಲು ಆಗುತ್ತಿಲ್ಲ. ಈ ಹಿಂದೆ ಮಂಡ್ಯಕ್ಕೆ ಐಐಟಿ ಬಂದಿತ್ತು, ಆಗ ಹಾಸನಕ್ಕೆ ಕೇಳಿದ್ದರು. ಕೊನೆಗೆ ನಮ್ಮ ಕಿತ್ತಾಟದಿಂದ ಐಐಟಿ ರಾಯಚೂರಿಗೆ ಹೋಯಿತು. ಜೆಡಿಎಸ್ನವರಿಗೆ ಮಂಡ್ಯದವರ ಮತ ಬೇಕು ಅಷ್ಟೇ. ಅದೇ ಕೃಷಿ ವಿವಿ ಆಗುವುದು ಇಷ್ಟ ಇಲ್ಲ. ಈ ಬಗ್ಗೆ ಹೋರಾಟ ಮಾಡಿದರೇ ಮಾಡಲಿ, ಬೇಡ ಎಂದವರು ಯಾರು ಎಂದು ಅಕ್ರೋಶ ವ್ಯಕ್ತಪಡಿಸಿದರು.
ವಿವಿಯ ಗಂಭೀರತೆ ಕಡಿಮೆ ಆಗಿದೆ
ಮಂಡ್ಯ ವಿಶ್ವವಿದ್ಯಾನಿಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ, ಗುಣಮಟ್ಟ, ಪದವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೌಲ್ಯ ಹೊಂದಿದೆ. ಅದನ್ನ ವಿಭಜಿಸಿದ ಪರಿಣಾಮ ವಿವಿಯ ಗಂಭೀರತೆ ಕಡಿಮೆ ಆಗಿದೆ. ಐದು ವರ್ಷದಲ್ಲಿ ಮಂಡ್ಯ ವಿವಿ ಸಂಪೂರ್ಣ ಸ್ವತಂತ್ರವಾಗಿಲ್ಲ. ಮಾತ್ರವಲ್ಲದೆ ಯುಜಿಸಿಯಿಂದ ಅನುದಾನ ಸರಿಯಾಗಿ ಬರಲ್ಲ. ಆದ್ದರಿಂದ ಮಂಡ್ಯ ವಿವಿಯನ್ನ ಮೈಸೂರು ವಿವಿಗೆ ಮತ್ತೆ ಸೇರಿಸಬೇಕು ಎಂಬ ಅಭಿಪ್ರಾಯ ಬಂದಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಿತಿಯೊಂದನ್ನು ಮಾಡಿದ್ದಾರೆ. ಆ ಸಮಿತಿ ಇನ್ನೂ ವರದಿಯನ್ನು ಸಲ್ಲಿಸಿಲ್ಲ. ಸದನದಲ್ಲಿ ಆ ಕುರಿತು ಚರ್ಚೆಯಾಗಿದೆ. ಸಚಿವ ಸಂಪುಟದಲ್ಲಿ ಸಭೆ ಮಾಡಿದ ಬಳಿಕ ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ಕುಡಿಯುವ ನೀರಿಗಾಗಿ ಕಾವೇರಿ 6 ನೇ ಹಂತದ ಯೋಜನೆಗೆ ಜೆಡಿಎಸ್ ವಿರೋಧಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರು ವಿಶ್ವ ವಿಖ್ಯಾತ ನಗರ. ಮಂಡ್ಯ ಸೇರಿದಂತೆ ಎಲ್ಲರೂ ಅಲ್ಲಿ ವಾಸಿಸುತ್ತಾರೆ. ದೆಹಲಿ ಬಿಟ್ಟರೇ ಬೆಂಗಳೂರು ನಗರವೇ ಆಕರ್ಷಣೆ. ಆದರೆ ರೈತರಿಗೂ ತೊಂದರೆಯಾಗದಂತೆ ನೀರು ಒದಗಿಸುವುದು ನಮ್ಮ ಪ್ರಯತ್ನ. ವ್ಯರ್ಥವಾಗುತ್ತಿರುವ ನೀರನ್ನು ತಡೆದು ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು. ಆ ಕುರಿತು ಸಿಎಂ ಗಮನಕ್ಕೂ ನಾವು ತಂದಿದ್ದೇವೆ.ಈ ವಿಚಾರಕ್ಕೆ ಜೆಡಿಎಸ್ನವರು ರಾಜಕಾರಣ ಬೆರೆಸುತ್ತಾರೆ. ನಾವು ರಾಜಕಾರಣ ಬೆರೆಸುವುದಕ್ಕೆ ಆಗುತ್ತಾ ಎಂದರು.
ನಾನು ರಾಜಣ್ಣ ಅಧ್ಯಕ್ಷರಾದರೆ ನಿಮಗೆ ಹಾಸನ ಜಿಲ್ಲೆ ಉಸ್ತುವಾರಿಯಂತೆ ಎಂಬ ಮಾಧ್ಯಮವರ ಪ್ರಶ್ನೆಗೆ ರಾಜಣ್ಣ ಅಧ್ಯಕ್ಷ ಸ್ಥಾನವನ್ನ ಕೇಳಿಯೆ ಇಲ್ಲ ಎಂದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ಅವರು ಆಗಿಲ್ಲ ಅದಕ್ಕೆ ಆ ರೀತಿ ಹೇಳಿರುತ್ತಾರೆ. 2018ರಲ್ಲಿ ಬಹುಮತ ಬರದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆಮೇಲೆ ಕುಮಾರಸ್ವಾಮಿ ಏನು ಮಾಡಿದ್ರು. ಎಚ್ಡಿಕೆ ಪೂರ್ಣಾವಧಿ ಸಿಎಂ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಬೇರೆಯವರಿಗೂ ಅದನ್ನೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್ ಮತ್ತಿತರರಿದ್ದರು.




