Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್ ಪರಿಶೀಲಿಸಿ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ

ಮಂಡ್ಯ ಜಿಲ್ಲೆಯಲ್ಲಿರುವ ಕಾರ್ಯನಿರ್ವಹಿಸುತ್ತಿರುವ 55 ಸ್ಕ್ಯಾನಿಂಗ್ ಸೆಂಟರ್, ಲ್ಯಾಬ್, ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರ ನಿಗಧಿ ಪಡಿಸಿರುವ ಕಾಯ್ದೆ ಹಾಗೂ ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ 10 ದಿನದೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಅವರಿಗೆ ಸೂಚನೆ ನೀಡಿದರು.

ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಲಿಂಗ ಪತ್ತೆ ತಡೆಗಟ್ಟಲು ರಚಿಸಲಾಗಿರುವ ಜಾಗೃತ ದಳದೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು. ಮಂಡ್ಯ ತಾಲ್ಲೂಕು ದುದ್ದ ಹೋಬಳಿಯ ಹಾಡ್ಯ ಗ್ರಾಮದಲ್ಲಿ ನಡೆದ ಹೆಣ್ಣು ಭ್ರೂಣ ಪತ್ತೆ ಪ್ರಕರಣ ಕುರಿತಂತೆ ಸಂಬಂಧಿಸಿದ ವ್ಯಾಪ್ತಿಯ ತಾಲ್ಲೂಕು ಆರೋಗ್ಯಾಧಿಕಾರಿ, ಮೆಡಿಕಲ್ ಆಫಿಸರ್, ಆಶಾ ಕಾರ್ಯಕರ್ತೆಯರಿಂದ ವರದಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ರೆಡಿಯೋಲಾಜಿಸ್ಟ್ ಗೆ ಮಾತ್ರ ಸ್ಕ್ಯಾನಿಂಗ್ ಕೆಲಸ

ಅಧಿಕೃತ ರೆಡಿಯೋಲಾಜಿಸ್ಟ್ ಮಾತ್ರ ಕಾರ್ಯನಿರ್ವಹಿಸಬೇಕು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ನಿಗಧಿಪಡಿಸಿರುವ ರೆಡಿಯೋಲಾಜಿಸ್ಟ್ ಮಾತ್ರ ಸ್ಕ್ಯಾನಿಂಗ್ ಕೆಲಸ ನಿರ್ವಹಿಸಬೇಕು. ಅವರನ್ನು ಹೊರತುಪಡಿಸಿ ಅವರ ಬದಲಿಗೆ ಬೇರೆಯವರು ಕಾರ್ಯನಿರ್ವಹಿಸುತ್ತಿದ್ದಲ್ಲಿ ಪರವಾನಗಿ ರದ್ದು ಪಡಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದರು.

ನಕಲಿ ಕ್ಲಿನಿಕ್ ಹಾಗೂ ವೈದ್ಯರನ್ನು ಪತ್ತೆ ಹಚ್ಚಿ ಕೆ.ಪಿ.ಎಂ.ಇ ಯಲ್ಲಿ ಪರವಾನಗಿ ಪಡೆದ ಪದ್ದತಿಯಲ್ಲೇ ಕ್ಲಿನಿಕ್ ಗಳು ಸೇವೆ ನೀಡಬೇಕು. ನಕಲಿ ಕ್ಲಿನಿಕ್ ಮತ್ತು ನಕಲಿ ವೈದ್ಯರು ಹೆಣ್ಣು ಭ್ರೂಣ ಹತ್ಯೆ ಹಾಗೂ ಮುಂತಾದ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತರೆ. ಜಾಗೃತ ದಳ ತಮ್ಮ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಿ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲಿಸಿ ವರದಿ ನೀಡಿ‌‌. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ

ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ವಿವಾಹವಾಗಿ ಗಭೀರ್ಣಿಯಾಗಿರುವ ಪ್ರಕರಣಗಳು ಬಾಲ್ಯ ವಿವಾಹವಾಗುತ್ತದೆ. ಅವುಗಳನ್ನು ಪತ್ತೆಹಚ್ಚಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ 15 ದಿನದೊಳಗಾಗಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹೆಣ್ಣು ಮಗು ಇರುವ ತಾಯಿಯ ಬಗ್ಗೆ ನಿಗಾ ವಹಿಸಿ ಮೊದಲನೇಯ ಮಗು ಹೆಣ್ಣು ಮಗು ಇರುವ ತಾಯಿ ಎರಡನೇ ಮಗುವಿಗೇ ಗರ್ಭೀರ್ಣಿಯಾದಾಗ ಅವರ ಬಗ್ಗೆ ಹೆಚ್ಚಿನ ಗಮನಹರಿಸಿ. ಈ ಕೆಲಸಗಳು ನಿರಂತರವಾಗಿ ತಳಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಡೆಯಬೇಕು. ಅನುಮಾನಸ್ಪದವಾಗಿ ಗರ್ಭಪಾತವಾದಲ್ಲಿ ವೈದ್ಯಕೀಯ ಕಾರಣದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಔಷಧಿ ಖರೀದಿಯ ಬಗ್ಗೆ ವರದಿ ಪಡೆದುಕೊಳ್ಳಿ

ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಾರಾಟವಾಗುವ ಔಷಧಿಗಳು ವೈದ್ಯರ ಸಲಹಾ ಚೀಟಿ ಇಲ್ಲದೇ ನೀಡಲು ಅವಕಾಶವಿಲ್ಲ. ಇದರ ಬಗ್ಗೆ ಕೂಡ ವರದಿ ಪಡೆದುಕೊಳ್ಳಿ, ಹೆಣ್ಣು ಭ್ರೂಣ ಹತ್ಯೆ ಅಮಾನವೀಯ ಕೃತ್ಯ ಹೆಣ್ಣು ಭ್ರೂಣ ಹತ್ಯೆ ಅಮಾನವೀಯ ಕೃತ್ಯವಾಗಿದ್ದು, ಜಿಲ್ಲೆ ತಲೆ ತಗ್ಗಿಸುವಂತಾಗಿದೆ. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಶಿಕ್ಷಾರ್ಹ ಅಪರಾಧ. ಇದಕ್ಕೆ ಸಹಕರಿಸುವವರ ವಿರುದ್ಧ ಸಹ ಕಾನೂನು ಕ್ರಮಕ್ಕೆ ಅವಕಾಶವಿದೆ. ಈ ಬಗ್ಗೆ ಜಾಗೃತ ದಳಗಳು ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮಹಿಳಾ ಸಂಘಗಳ ಸಹಯೋಗದೊಂದಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಎಂದರು.

ಮೂರು ತಿಂಗಳಿಗೊಮ್ಮೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿ‌.ಸಿ.ಪಿ.ಡಿ ಎನ್ ಟಿ ಸಭೆ ನಡೆಯಬೇಕು. ಉಪವಿಭಾಗಾಧಿಕಾರಿಗಳು ಸಭೆ ನಡೆಸಿ ವರದಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ,  ಪಿ.ಸಿ.ಪಿ.ಡಿ.ಎನ್.ಟಿ ಕಾಯ್ದೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಯಾವ ರೀತಿ ಇರಬೇಕು, ಯಾವ ದಾಖಲೆಗಳು ಇರಬೇಕು ಕಾಯ್ದೆ ಉಲ್ಲಂಘಿಸಿದ್ದಲ್ಲಿ 3 ವರ್ಷ ಶಿಕ್ಷೆ ಹಾಗೂ ದಂಡ ಇರುವ ಬಗ್ಗೆ ಜಾಗೃತ ದಳದ ಸದಸ್ಯರಿಗೆ ವಿವರಿಸಿದರು.

ಕಳೆದ ಮೂರು ವರ್ಷಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳ ವಿವರ, 10 ನೇ ತರಗತಿಯ ನಂತರ ಅವರ ಮುಂದಿನ ಶಿಕ್ಷಣದ ದಾಖಲಾತಿ ಅಥವಾ ಶಾಲೆಯಿಂದ ಹೊರಗೆ ಉಳಿದಿದ್ದರೆ ಏನು ಮಾಡುತ್ತಿದ್ದಾರೆ ಎಂದು ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ನಂದೀಶ್, ಶಿವಮೂರ್ತಿ, ಎ.ಎಸ್.ಪಿ ತಿಮ್ಮಯ್ಯ ಸೇರಿದಂತೆ ಎಲ್ಲಾ ತಾಲ್ಲೂಕು ತಹಶೀಲ್ದಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!