Friday, October 11, 2024

ಪ್ರಾಯೋಗಿಕ ಆವೃತ್ತಿ

ರಾಸಾಯನಿಕ ವಿಷಾನಿಲ ಸೋರಿಕೆ:ರೈತರಿಗೆ ತುರ್ತು ಪರಿಹಾರಕ್ಕೆ ಸಿಎಂಗೆ ದಿನೇಶ್ ಗೂಳೀಗೌಡ ಆಗ್ರಹ

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆ|| ಕೀರ್ತಿ ರಾಸಾಯನಿಕ ಕಾರ್ಖಾನೆಯಿಂದ ಹೊರಬಂದ ವಿಷಾನಿಲ ಸೋರಿಕೆಯಿಂದ ಹಾನಿಗೊಳಗಾದ ರೈತರ ಬೆಳೆಗೆ ತುರ್ತು ಪರಿಹಾರ ನೀಡಬೇಕು ಮತ್ತು ಕಾರ್ಖಾನೆ ಮೇಲೆ ಕ್ರಮ ಜರುಗಿಸಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಇಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, ರಾಸಾಯನಿಕ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳದ ಹಾಗೂ ರೈತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ಕ್ರಮ‌ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಸಗೊಬ್ಬರ ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ಹೇಳಿ ರಾಸಾಯನಿಕ ಕಾರ್ಖಾನೆ ಸ್ಥಾಪಿಸಿದ್ದಾರೆ. ಅಂದಿನ ಬೇಬಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯಿಂದ ಪರವಾನಿಗೆ ಪಡೆದುಕೊಂಡಿರುವ ಹಿಂದೆ ಕುತಂತ್ರ ನಡೆದಿದೆ.ಪ್ರಸ್ತುತ ಇರುವ ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರಚಿ ಹಿಂದಿನ ನಡಾವಳಿಗೆ ಅನುಮತಿ ನೀಡುವ ಬಗ್ಗೆ ಬರೆದುಕೊಂಡಿದ್ದಾರೆಂದು ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಆರೋಪಿಸಿದ್ದಾರೆ.

ಈ ಕಾರ್ಖಾನೆಯ ಮಾಲೀಕರು ಪರವಾನಿಗೆ ಪಡೆಯುವಾಗ ನೀಡಿರುವ ಹೇಳಿಕೆಯಂತೆ ರಸಗೊಬ್ಬರದ ಕಾರ್ಖಾನೆಯನ್ನು ಪ್ರಾರಂಭಿಸದೇ ಬೇರೆ ಯಾವುದೋ ರಾಸಾಯನಿಕ ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದು, ಇದರಿಂದ ವಿಷಾನಿಲವು ಸೋರಿಕೆಯಾಗಿದ್ದು ಸದರಿ ಗ್ರಾಮದ ರೈತರುಗಳ ಬೆಳೆಗಳು ಸಂಪೂರ್ಣ ನಾಶವಾಗಿರುವುದಾಗಿ ಗ್ರಾಮಸ್ಥರು ಸಂಬಂಧಪಟ್ಟವರ ಗಮನಕ್ಕೆ ತಂದಿರುತ್ತಾರೆ. 

ಈ ಪೈಕಿ ಸದರಿ ಕಾರ್ಖಾನೆಯಿಂದ ಸೋರಿಕೆಯಾಗುತ್ತಿರುವ ವಿಷಾನಿಲದಿಂದ ಗ್ರಾಮದ ಸುಮಾರು 12-15 ಎಕರೆ ಜಮೀನು ಹಾಗೂ ಸುಮಾರು 20 ಎಕರೆಗೂ ಮೇಲ್ಪಟ್ಟು ಅರಣ್ಯ ಇಲಾಖೆಗೆ ಸೇರಿದ ಅರಣ್ಯ ಪ್ರದೇಶವು ಸಹ ಹಾನಿಗೊಳಗಾಗಿರುತ್ತದೆ. ಇದರಲ್ಲಿ ರೈತರು ಬೆಳೆದ ಸುಮಾರು ನೂರಾರು ತೆಂಗಿನ ಗಿಡಗಳು, ಟೊಮೊಟೋ ಬೆಳೆ, ರಾಗಿ ಮತ್ತು ಹುರುಳಿ ಬೆಳೆಯು ಸಂಪೂರ್ಣ ನಾಶವಾಗಿರುವುದರ ಜೊತೆಗೆ ನೀಲಗಿರಿ ಮರಗಳು ಸಹ ನಾಶವಾಗಿರುತ್ತವೆ.

ಸದರಿ ರಾಸಾಯನಿಕ ಕಾರ್ಖಾನೆಯು ವಿಷಾನಿಲವನ್ನು ಹೊರ ಸೂಸುತ್ತಿರುವ ಬಗ್ಗೆ ಜನವರಿ ತಿಂಗಳಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ನಾನು ಸದನದಲ್ಲಿ ಗಮನ ಸೆಳೆಯ ಸೂಚನೆಯ ಮೇಲೆ ಪ್ರಸ್ತಾಪಿಸಿದಾಗ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಉತ್ತರ ನೀಡುತ್ತಾ ವಿಷಾನಿಲದ ಸೋರಿಕೆಯ ಘಟನೆಯ ಬಗ್ಗೆ ವರದಿ ತರೆಸಿ ರೈತರಿಗೆ ಆಗಿರುವ ನಷ್ಟವನ್ನು ಭರಿಸಕೊಡಲಾಗುವುದೆಂದು, ಇಂತಹ ರಾಸಾಯನಿಕ ಕಾರ್ಖಾನೆಗಳಿಗೆ ಪರವಾನಿಗೆ ನೀಡಿದ ಅಧಿಕಾರಿಗಳ ಮೇಲೆ ತುರ್ತು ಕ್ರಮಕೈಗೊಳ್ಳುವುದಾಗಿ ಸದನದಲ್ಲಿ ಉತ್ತರಿಸಿದ್ದರು.

ಆದರೆ ಸದನವು ಮುಗಿದು ಈಗಾಗಲೇ ನಾಲ್ಕು ತಿಂಗಳುಗಳು ಕಳೆಯುತ್ತ ಬಂದಿದ್ದರೂ ಸಹ ಸಂಬಂಧಪಟ್ಟ ಇಲಾಖೆಯವರಾಗಲೀ ಅಥವಾ ಮಾನ್ಯ ಸಚಿವರಾಗಲೀ ಅಥವಾ ಜಿಲ್ಲಾಡಳಿತವಾಗಲೀ ಸದರಿ ವಿಷಯದ ಬಗ್ಗೆ ಗಮನ ಹರಿಸದೇ ಇರುವುದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಆದ್ದರಿಂದ ಮೇಲಿನ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮೆ|| ಕೀರ್ತಿ ರಾಸಾಯನಿಕ ಕಾರ್ಖಾನೆಯಿಂದ ವಿಷಾನಿಲದ ಸೋರಿಕೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ತುರ್ತು ಪರಿಹಾರವನ್ನು ನೀಡಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕೆಂದು ಹಾಗೂ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತವು ವಿಫಲವಾಗಿದ್ದು ಹಾಗೂ ಇದುವರೆವಿಗೂ ಯಾವುದೇ ಕ್ರಮಕೈಗೊಳ್ಳದಿರುವ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ತುರ್ತು ಕಾನೂನು ಕ್ರಮಕೈಗೊಳ್ಳಬೇಕೆಂದು ದಿನೇಶ್ ಗೂಳೀಗೌಡ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!