ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಕಾವೇರಿ ನದಿ ನೀರು ಪ್ರಾಧಿಕಾರ ಆದೇಶ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ರೈತ ರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಜೆಡಿಎಸ್ ಮಾಜಿ ಶಾಸಕರು ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು.
ಹೋರಾಟದಲ್ಲಿ ಮಾಜಿ ಸಚಿವ ಡಿಸಿ ತಮ್ಮಣ್ಣ,ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ ಹಾಗೂ ಡಾ. ಕೆ. ಅನ್ನದಾನಿ ಭಾಗಿಯಾಗಿ ಧರಣಿಗೆ ಬೆಂಬಲ ಸೂಚಿಸಿದರೆ, ಎಂದಿನಂತೆ ರೈತರು, ಕನ್ನಡ ಪರ ಹೋರಾಟಗಾರರು ಸೇರಿ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೆ ಆರ್ ಎಸ್ ನಿಂದ ಬಿಡುಗಡೆ ಮಾಡಿರುವ ನೀರು ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸೆ.6 ಕ್ಕೆಮುಂದೂಡಿಕೆಯಾಗಿದೆ. ಇದರ ಉದ್ದೇಶ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿರಂತರವಾಗಿ ಹರಿಯಲಿ ಎಂಬುದಾಗಿದೆ, ಅಲ್ಲಿಯವರೆಗೂ 30,000ಕ್ಕೂ ಹೆಚ್ಚು ಕ್ಯೂ ಸೆಕ್ ನೀರು ಹರಿದು ಹೋಗಲಿದೆ ಈಗಾಗಲೇ ಜಲಾಶಯದಲ್ಲಿ ನೀರಿನ ಪ್ರಮಾಣ 99 ಅಡಿಗೆ ಕುಸಿದಿದೆ, ಮುಂದಿನ ದಿನಗಳಲ್ಲಿ ಕುಡಿಯಲು ಸಹ ನೀರು ಸಿಗದಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ, ರಾಜ್ಯ ಸರ್ಕಾರ ರೈತರ ಕತ್ತು ಕುಯ್ಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಹೋರಾಟದಲ್ಲಿ ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಬೇಕ್ರಿ ರಮೇಶ್, ಕೆ ಬೋರಯ್ಯ, ಜೆಡಿಎಸ್ ಮುಖಂಡರಾದ ರಾಜಣ್ಣ, ಸ್ವಾಮಿ ಗೌಡ, ರವಿ, ಸುಜಾತ ಕೃಷ್ಣ, ಸಿ. ಟಿ ಮಂಜುನಾಥ್, ಎಂ ಎಲ್ ತುಳಸೀದರ್, ಇಂಡುವಾಳು ಬಸವರಾಜ್, ಕರವೇ ಅಶೋಕ ಭಾಗವಹಿಸಿದ್ದರು.




