Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಚಿವ ಸುಧಾಕರ್‌ಗೆ ಸಮನ್ಸ್‌ ಜಾರಿ : ಕೋರ್ಟ್ ಮುಂದೆ ಕ್ಷಮೆ ಯಾಚಿಸುವಂತೆ ಆಂಜನೇಯ ರೆಡ್ಡಿ ಒತ್ತಾಯ

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಸುಧಾಕರ್‌ಗೆ ಸಮನ್ಸ್‌ ಸಹಾ ಜಾರಿ ಮಾಡಿದೆ. ಹಣಕಾಸಿನ ಪರಿಹಾರ ಕೋರದ ದಾವೇದಾರ ಆಂಜನೇಯ ರೆಡ್ಡಿ ಇದು ತನ್ನ ಗೌರವದ ವಿಚಾರವಾಗಿರುವುದರಿಂದ ಅವರು ನ್ಯಾಯಾಲಯದ ಮುಂದೆ ಕ್ಷಮೆ ಯಾಚಿಸಬೇಕು ಎಂದಿದ್ದಾರೆ. ಬಯಲು ಸೀಮೆಯ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಸುಮಾರು ಒಂದೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ಮಾಡುತ್ತಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಆಂಜನೇಯ ರೆಡ್ಡಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದವರು.

ಸಚಿವ ಸುಧಾಕರ್‌ ಅವರು ಆಂಜನೇಯ ರೆಡ್ಡಿ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದರೆಂದು ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್‌, ಸಚಿವರಿಗೆ ಸಮನ್ಸ್‌ ಜಾರಿಗೊಳಿಸಿದೆ.

ಸಮನ್ಸ್‌ ಜಾರಿಯಾದ ಬಳಿಕ ಮಾತನಾಡಿದ ಆಂಜನೇಯ ರೆಡ್ಡಿ, “ಸುಧಾಕರ್‌ ಅವರ ಹುಟ್ಟುಹಬ್ಬದ ದಿನದಂದು ನನ್ನ ಆಪ್ತರ ಎದುರಿಗೆ, ‘ರೈತರಿಗೆ ಕಳ್ಳಬಟ್ಟಿ ಕುಡಿಸಿ ಜೈಲು ಸೇರಿದ್ದ ವ್ಯಕ್ತಿ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ’ ಎಂಬ ಹೇಳಿಕೆ ನೀಡಿ ನಿಂದಿಸಿದ್ದರು. ಈ ಸುದ್ದಿ ಪತ್ರಿಕೆಗಳಲ್ಲಿಯೂ ಪ್ರಕಟವಾಗಿತ್ತು. ಅದಾದ ಬಳಿಕ ಅವರು ಕ್ಷಮೆ ಯಾಚಿಸುವಂತೆ ನಾನೂ ಕೂಡ ಪ್ರಕಟಣೆಯಲ್ಲಿ ತಿಳಿಸಿದ್ದೆ” ಎಂದರು. 

“ಅವರು ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಿದ್ದು ತಪ್ಪು. ಅವರು ನನ್ನೊಂದಿಗೆ ಮಾತುಕತೆ ನಡೆಸುತ್ತಾರೆಂದು ಒಂದು ವರ್ಷಕಾಲ ಸುಮ್ಮನಿದ್ದೆ. ಆದರೆ, ಅವರು ಯಾವುದಕ್ಕೂ ಮುಂದಾಗದಿದ್ದಾಗ 2020ರಲ್ಲಿ ಡಾ. ಸುಧಾಕರ್‌ ವಿರುದ್ಧ ಮಾನನಷ್ಟ ಮೊಕದ್ದಮೆಯ ದಾವೆ ಹೂಡಿದ್ದೆ. ಸುಪ್ರೀಂ ಕೋರ್ಟ್‌ ಸಹಾ ಇಂತಹ ಪ್ರಕರಣವನ್ನು ಕ್ರಿಮಿನಲ್‌ ಪ್ರಕರಣ ಎಂದು ಹೇಳಿತ್ತು. ಇದೀಗ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸುಧಾಕರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದು, ಸಮನ್ಸ್‌ ಜಾರಿ ಮಾಡಿದೆ” ಎಂದರು.

“ನನ್ನ ಗೌರವದ ವಿಚಾರವಾಗಿರುವುದರಿಂದ ನನಗೆ ಹಣ ಪರಿಹಾರವಲ್ಲ. ನಮ್ಮಿಬ್ಬರ ನಡುವಿನ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅವರು ನ್ಯಾಯಾಲಯದಲ್ಲಿ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.

ರೆಡ್ಡಿಯವರ ಪ್ರಕಾರ ಘಟನೆಯ ಹಿನ್ನೆಲೆ ಏನು?

“ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹಲವಾರು ವರ್ಷಗಳ ಕಾಲ ಹೋರಾಟ ಮಾಡಲಾಯಿತು. ಅಂದಿನ ಹೋರಾಟದ ಕೆಲವು ಮುಖಂಡರು ಎತ್ತಿನಹೊಳೆ ಯೋಜನೆಯ ಹಿಂದೆ ಹೋದರು. ಈ ಯೋಜನೆಯಿಂದ ನಮ್ಮ ಜಿಲ್ಲೆಗಳಿಗೆ ನೀರು ಸಿಗುವುದಿಲ್ಲ ಎಂದು ಗೊತ್ತಿದ್ದರೂ ಕಮಿಷನ್‌ ಆಸೆಗಾಗಿ ರಾಜಕಾರಣಿಗಳು ಯೋಜನೆಯ ಬೆನ್ನತ್ತಿದರು” ಎಂದು  ರೆಡ್ಡಿಯವರು ಈದಿನ.ಕಾಮ್‌ಗೆ ತಿಳಿಸಿದರು.

“ಕೆಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ ಯೋಜನೆಗಳಿಗೆ ಸಂಬಂಧಿಸಿದಂತೆಯೂ ಕೊಳಚೆ ನೀರನ್ನು ನಮ್ಮ ಭಾಗಕ್ಕೆ ಸರಿಯಾಗಿ ಶುದ್ಧಿ ಮಾಡದೇ ಹರಿಸುವುದರ ಬಗ್ಗೆ ನಮಗೆ ತಕರಾರುಗಳಿತ್ತು. ಈ ಮಧ್ಯೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಮ್ಮ ಭಾಗದ ಶಾಸಕರಾದ ಸುಧಾಕರ್‌ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಮೊದಲೇ ಎತ್ತಿನಹೊಳೆ ಇತ್ಯಾದಿ ಯೋಜನೆಗಳು ಜನಪ್ರತಿನಿಧಿಗಳು ಜೇಬು ತುಂಬಿಸುವ, ಜನರಿಗೆ ಶುದ್ಧ ನೀರು ಕೊಡದ ಮೋಸದ ಕಾರ್ಯಕ್ರಮಗಳು ಎಂಬ ಆತಂಕ ನಮಗಿತ್ತು. ಅಂತಹ ಸಂದರ್ಭದಲ್ಲಿ ಅರ್ಹತೆಯಿಲ್ಲದ ವ್ಯಕ್ತಿಯೊಬ್ಬರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಿಸಿದ್ದರ ಹಿಂದೆ ನಮಗೆ ಸಮಸ್ಯೆ ಕಂಡಿತು. ಸುಪ್ರೀಂಕೋರ್ಟ್‌ ಸಹಾ ಅರ್ಹ ಮಾನದಂಡಗಳಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡುವಂತೆ ಸೂಚಿಸಿತ್ತು. ಹಾಗಾಗಿ, ಈ  ನೇಮಕದ ವಿರುದ್ಧ ನಾನು ರಾಜ್ಯ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ” ಎಂದು  ಅವರು ಹೇಳಿದರು.  

“ಶುದ್ಧ ನೀರಿನ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದ್ದರಿಂದ ಮಂಡಳಿಗೆ ನೇಮಕ ಮಾಡಿದ್ದ ವ್ಯಕ್ತಿಯ ಅರ್ಹತೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪಿಎಎಲ್‌ ಹಾಕಿದೆವು. ಹೈಕೋರ್ಟ್ ಅದನ್ನು ಪರಿಗಣಿಸಿ ಸರ್ಕಾರಕ್ಕೆ ನೋಟಿಸು ನೀಡಿತ್ತು. ಆ ಸಂದರ್ಭದಲ್ಲಿ ಅವರು ಅವರ ಅರ್ಹತಾ ದಾಖಲೆಗಳನ್ನು ಸಲ್ಲಿಸಿ ಅಧ್ಯಕ್ಷರಾಗಿ ಮುಂದುವರೆಯಬಹುದಿತ್ತು.  ಆದರೆ, ಅವರೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಿದರು” ಎಂದು ಆರೋಪಿಸಿದರು. 

“ಸಾರ್ವಜನಿಕ ಕೆಲಸ ಮಾಡುವ ನಾವುಗಳು ಮಾಡುವ ಹೋರಾಟ, ಆರೋಪ, ಪ್ರತ್ಯಾರೋಪಗಳು ಘನತೆಯಿಂದ ಕೂಡಿರಬೇಕು. ಅದು ದಾಟಿ ಹೋದಾಗ ಸುಮ್ಮನಿರುವುದು ಸರಿಯಲ್ಲ. ಯಾರಿಗೆ ಘನತೆ, ಗೌರವ ಇರುತ್ತದೋ ಅವರು ಸೂಕ್ತವಾದ ಕಾನೂನು ದಾರಿಯನ್ನು ಹುಡುಕಲೇಬೇಕಾಗುತ್ತದೆ. ಹಾಗಾಗಿ ನಾನು ಸುಧಾಕರ್‌ ನಡೆಸಿದ ವೈಯಕ್ತಿಕ ದಾಳಿ, ಸುಳ್ಳು ಆರೋಪದ ವಿರುದ್ಧ ನ್ಯಾಯಾಲಯದ ಕದ ತಟ್ಟಿದೆ” ಎಂದು ಆಂಜನೇಯ ರೆಡ್ಡಿ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!