Friday, September 20, 2024

ಪ್ರಾಯೋಗಿಕ ಆವೃತ್ತಿ

ಹರಿಯಾಣ| ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ಪ್ರಧಾನಿ, ಸಿಎಂಗೆ ಪತ್ರ ಬರೆದ 500 ವಿದ್ಯಾರ್ಥಿನಿಯರು

ಹರಿಯಾಣದ ಸಿರ್ಸಾ ಜಿಲ್ಲೆಯ ಚೌಧರಿ ದೇವಿ ಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಐನೂರು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮನೋಹರ್‌ ಲಾಲ್‌ ಕಟ್ಟರ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಾಧ್ಯಾಪಕನನ್ನು ಕೆಲಸದಿಂದ ಅಮಾನತ್ತು ಮಾಡಬೇಕು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ, ಪ್ರಾಧ್ಯಾಪಕನ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪತ್ರದ ಪ್ರತಿಗಳನ್ನು ವಿವಿಯ ಉಪಕುಲಪತಿ ಡಾ. ಅಜ್ಮೀರ್ ಸಿಂಗ್ ಮಲಿಕ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಆಯ್ದ ಮಾಧ್ಯಮ ಸಂಸ್ಥೆಗಳಿಗೂ ವಿದ್ಯಾರ್ಥಿನಿಯರು ಕಳುಹಿಸಿದ್ದಾರೆ.

ವಿದ್ಯಾರ್ಥಿನಿಯರು ತಮ್ಮ ಪತ್ರದಲ್ಲಿ ಪ್ರಾಧ್ಯಾಪಕನ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಪ್ರಾಧ್ಯಾಪಕ ಅವರ ಕಚೇರಿಯ ಸ್ನಾನಗೃಹಕ್ಕೆ ನಮ್ಮನ್ನು ಕರೆಸಿ ಖಾಸಗಿ ಭಾಗಗಳನ್ನು ಮುಟ್ಟುತ್ತಾರೆ. ನಮ್ಮೊಂದಿಗೆ ಆಶ್ಲೀಲ ಕೆಲಸಗಳನ್ನು ಮಾಡಿಸುತ್ತಾರೆ. ನಾವು ಪ್ರತಿಭಟಿಸಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಪ್ರಾಧ್ಯಾಪಕ ನಮಗೆ ಕೊಲೆ ಬೆದರಿಕೆ ಹಾಕಿದ್ದಾರೆ” ಎಂದು ಪತ್ರದಲ್ಲಿ ಹೇಳಿದ್ದಾರೆ.

“ಹಲವು ತಿಂಗಳಿನಿಂದ ಈ ಕೃತ್ಯ ಎಸಗುತ್ತಿದ್ದಾರೆ. ಅವರನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರು ತಾನೊಬ್ಬ ಉನ್ನತ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದಾರೆ” ಎಂದು ವಿದ್ಯಾರ್ಥಿಯರು ತಿಳಿಸಿದ್ದಾರೆ.

“>

ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. “ನಾವು ತಕ್ಷಣವೇ ಐಪಿಎಸ್ ಅಧಿಕಾರಿ ದೀಪ್ತಿ ಗಾರ್ಗ್ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಿದ್ದೇವೆ. ಎಸ್‌ಐಟಿ ಈಗಾಗಲೇ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದೆ. ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸುತ್ತಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀಕಾಂತ್ ಜಾಧವ್ ಹೇಳಿದ್ದಾರೆ.

“ನಾವು ಉಪಕುಲಪತಿಗೆ ಈ ಬಗ್ಗೆ ದೂರು ನೀಡಿದ್ದೇವೆ. ಆದರೆ, ಅವರು ನಮ್ಮ ಸಹಾಯಕ್ಕೆ ಬರುವ ಬದಲು, ಪ್ರಾಧ್ಯಾಪಕನ ಪರ ನಿಂತಿದ್ದಾರೆ. ನಮ್ಮನ್ನು ವಿವಿಯಿಂದ ಹೊರ ಹಾಕುವುದಾಗಿ ಹೇಳುತ್ತಿದ್ದಾರೆ. ಪ್ರಾಧ್ಯಾಪಕನಿಗೆ ರಾಜಕೀಯ ಪ್ರಭಾವ ಇದೆ. ಉಪಕುಲಪತಿ ವಿದ್ಯಾರ್ಥಿನಿಯರಿಗೆ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ನೀಡುವ ಮೂಲಕ ಅವರ ಬಾಯಿ ಮುಚ್ಚಿಸುತ್ತಿದ್ದಾರೆ” ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

“ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಿವಿಯ ರಿಜಿಸ್ಟ್ರಾರ್ ಡಾ. ಬನ್ಸಾಲ್ ಹೇಳಿದ್ದಾರೆ. ಆರೋಪಿ ಪ್ರೊಫೆಸರ್ ಈಗಾಗಲೇ ತಮ್ಮ ಕಚೇರಿಯ ಸಿಸಿಟಿವಿ ಫೂಟೇಜ್‌ನಿಂದ ಅವರ ಅಸಭ್ಯ ಕೃತ್ಯಗಳನ್ನು ಅಳಿಸಿದ್ದಾರೆ” ಎಂದು ವಿದ್ಯಾರ್ಥಿನಿಯರ ಪತ್ರದಲ್ಲಿ ಹೇಳಲಾಗಿದೆ. ತಮ್ಮ ಕುಟುಂಬಗಳಿಗೆ ಅಗೌರವದ ಭಯದಿಂದ ತಮ್ಮ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದೇವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ರಿಜಿಸ್ಟಾರ್ ಮಾಹಿತಿ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!