ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದು, ಮಾದರಿ ಮೇಲುಕೋಟೆ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ದೊಡ್ಡಮ್ಮ ದೇವಿ ಪೂಜಾ ಮಹೋತ್ಸವದ ಅಂಗವಾಗಿ ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ಹರಿಸಿದ್ದಕ್ಕಾಗಿ ಹೊಳಲು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

2006-2007ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹೊಳಲು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ದುದ್ದ ಹೋಬಳಿ ನೀರಾವರಿಯಿಂದ ವಂಚಿತವಾಗಿರುವ ಬಗ್ಗೆ ತಿಳಿಸಿ, ಈ ಭಾಗ್ಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಅದರಂತೆ ಈ ಭಾಗದ ಮುಖಂಡರ ಮಾತಿಗೆ ಮನ್ನಣೆ ನೀಡಿ ಕಳೆದ 14-15 ವರ್ಷಗಳ ಅವಧಿಯಲ್ಲಿ ಈ ಭಾಗಕ್ಕೆ ನೀರಾವರಿ ಯೋಜನೆ ತರಲು ಸಾಧ್ಯವಾಗಿದೆ. ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಇನ್ನೂ 54 ಕೆರೆಗಳಿಗೆ ನೀರು ತುಂಬಿಸಲು ಸಚಿವ ಮಾಧುಸ್ವಾಮಿಯವರೇ ಮಂಜೂರಾತಿ ನೀಡಿದ್ದಾರೆ ಎಂದರು.
ದುದ್ದ ಹೋಬಳಿಯ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಸಿದ್ಧನಿದ್ದೇನೆ. ನನಗೆ ಪ್ರತಿ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ನೀಡುವ ಈ ಭಾಗದ ಜನರ ಋಣ ತೀರಿಸುವ ಕೆಲಸವನ್ನು ಮಾಡುತ್ತೇನೆ. ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಮಾದರಿ ಹೋಬಳಿಯಾಗಿ ದುದ್ದ ಹೋಬಳಿಯನ್ನು ರೂಪಿಸುವುದಾಗಿ ಭರವಸೆ ನೀಡಿದರು.

ಹೊಳಲು ಗ್ರಾಮದ ಕೂಲಿ ಮಾಡುವ ಮಹಿಳೆಯ ಮಗಳಿಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಕೂಲಿ ಮಾಡುವ ಕುಟುಂಬದ ಹೆಣ್ಣು ಮಗಳಿಗೆ ನಾನೇ ಪ್ರವೇಶ ಶುಲ್ಕ ತುಂಬಿ ಕಾಲೇಜುಗೆ ಪ್ರವೇಶಾತಿ ಕೊಡಿಸಿದ್ದೇನೆ.
ಇಂಥ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿರುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಮನುಷ್ಯನಾಗಿ ಬಾಳಬೇಕು. ನಮಗೆ ಒಳ್ಳೆಯ ಕೆಲಸ ಮಾಡಲು 24 ಗಂಟೆಗಳು ಸಾಲುತ್ತಿಲ್ಲ, ಅಂತದರಲ್ಲಿ ಕೆಟ್ಟ ಕೆಲಸವನ್ನು ಏಕೆ ಮಾಡಬೇಕು. ಜನತೆ ನೀಡಿರುವ ಅಧಿಕಾರವನ್ನು ಜನರಿಗಾಗಿ ಬಳಸಬೇಕು ಎಂದರು.
ದುದ್ಧ ಹೋಬಳಿಯ ನಾಯಕರ ಜೊತೆ ನಾನು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ, ಅದೇ ರೀತಿ ರಾಜ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಆಡಳಿತ ನಡೆಸುವುದು ಅಷ್ಟೇ ಸತ್ಯ.ನಿಮ್ಮ ಆಶೀರ್ವಾದ ನನಗೆ ಮತ್ತು ಜೆಡಿಎಸ್ ಪಕ್ಷಕ್ಕೆ ನೀಡಬೇಕಿದೆ ಎಂದರು.
ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ತುಂಬಿಸಿದ ಹಿನ್ನೆಲೆಯಲ್ಲಿ ಶಾಸಕ ಸಿ. ಎಸ್. ಪುಟ್ಟರಾಜು ಹಾಗೂ ನಾಗಮ್ಮ ಪುಟ್ಟರಾಜು ಅವರಿಗೆ ಹೊಳಲು ಗ್ರಾಮಸ್ಥರು ಪುಷ್ಪಮಾಲೆ ಹಾಕಿ ನೆನಪಿನ ಕಾಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಬಿ. ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ. ಆರ್. ರಾಮಚಂದ್ರು, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಶ್, ಹೊಳಲು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಲ್ಲವಿ, ಜೆಡಿಎಸ್ ಮುಖಂಡರಾದ ಎಚ್.ಎಲ್. ಶಿವಣ್ಣ,ಜಿ.ಪಂ.ಮಾಜಿ ಸದಸ್ಯ ಮಾದಪ್ಪ, ಬಾಲರಾಜ್, ರವಿಕುಮಾರ್ ಸೇರಿದಂತೆ ಹಲವರಿದ್ದರು.




