ನಾಗತಿಹಳ್ಳಿ ಗಂಗಾಧರ್ ನಿರ್ದೇಶನದ `ಕಿರಿಕ್’ ಚಲನಚಿತ್ರವು ಮೇ.23ರಂದು ರಾಜ್ಯಾದ್ಯಂತ ತೆರ ಕಾಣಲಿದ್ದು,ವೀಕ್ಷಕರು ಚಿತ್ರಮಂದಿರದಕ್ಕೆ ಬಂದು ವೀಕ್ಷಿಸುವ ಮೂಲಕ ಹೊಸಬರ ಪ್ರಯತ್ನ ಯಶಸ್ವಿಗೊಳಿಸ ಬೇಕೆಂದು ಚಿತ್ರದ ಛಾಯಾಗ್ರಾಹಕ ಕೀರ್ತಿವರ್ಧನ್ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಿರಿಕ್ ಚಲನಚಿತ್ರ ಉತ್ತಮ ಕಥೆ ಹೊಂದಿದ್ದು,ಪ್ರತಿಯೊಬ್ಬರು ಕುಟುಂಬ ಸಮೇತ ಬಂದು ಚಿತ್ರ ನೋಡಿ ಆಶೀರ್ವದಿಸಬೇಕು.ಚಿತ್ರದ ಶೇ.70ರಷ್ಟು ಕಲಾವಿದರು ಜಿಲ್ಲೆಯ ನಾಗಮಂಗಲ ತಾಲೂಕಿನವರೇ ಆಗಿದ್ದು,ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ ಎಂದರು.

ಮಾರ್ಚ್ 20ರಂದು ಕಿರಿಕ್ ಚಿತ್ರದ ಟ್ರೈಲರ್ ಅನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಿದ್ದು, ರಾಜ್ಯದ 50ರಿಂದ 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಟೆನ್ನಿಸ್ ಕೃಷ್ಣ, ಹೊನವಳ್ಳಿ ಕೃಷ್ಣರಂತಹ ಹಿರಿಯ ಕಲಾವಿದರ ಜೊತೆ ಸೀರುಂಡೆ ರಘು,ರಾಮಿ,ಸಿದ್ದಾರ್ಥ್ ಅಂತಹ ಕನ್ನಡದ ನಟರು ಅಭಿನಯಿಸಿದ್ದಾರೆ.ಮಂಡ್ಯ, ಮೈಸೂರು, ಕಾರವಾರ, ಮಂಗಳೂರು ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದು,ತಂದೆ-ತಾಯಿ ಇಲ್ಲದ ಯುವಕನೊಬ್ಬ ಯಾವ ರೀತಿ ಸಮಾಜವನ್ನು ಎದುರಿಸುತ್ತಾನೆ ಎನ್ನುವ ಸಂದೇಶ ಈ ಸಿನಿಮಾದಲ್ಲಿದೆ.ಸಿನಿಮಾದ ಕಲಾವಿದರು ಹಾಗೂ ತಂತ್ರಜ್ಞರು ನಾಗಮಂಗಲ ತಾಲ್ಲೂಕಿನವರೇ ಆಗಿದ್ದು,ನಮ್ಮೆಲ್ಲರ ಪ್ರಯತ್ನ ಯಶಸ್ವಿಯಾಗಲು ಚಿತ್ರ ರಸಿಕರು ಚಿತ್ರ ಮಂದಿರಕ್ಕೆ ಬಂದು ವೀಕ್ಷಿಸುವಂತೆ ಕೋರಿದರು.
ಆರ್.ವಿ.ಭರತ್ ಅವರ ಸಂಗೀತ ನಿರ್ದೇಶನದಲ್ಲಿ ನಾಲ್ಕು ಸುಮಧುರ ಹಾಡುಗಳಿವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ನಿರ್ಮಾಪಕ ನಾಗರಾಜ್, ಸಹ ನಿರ್ಮಾಪಕ ಹರೀಶ್, ನಾಯಕ ನಟ ರವಿಶೆಟ್ಟಿ, ರುದ್ರಾರಾಧ್ಯ, ದೀಪಕ್‌ಗೌಡ, ರಾಜೇಶ್ ಉಪಸ್ಥಿತರಿದ್ದರು.




