ಇಂದು ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ ನಿಂದ ಮೆರವಣಿಗೆ ಹೊರಟು ಗುರುಮಠದ ಕಚೇರಿಯಲ್ಲಿ ಸಿಐಟಿಯು ಸಂಘಟನೆಯಿಂದ ಕಾರ್ಮಿಕ ದಿನಾಚಾರಣೆಯನ್ನು ಆಚರಿಸಲಾಯಿತು.
ಕೇಂದ್ರ ಸರ್ಕಾರ ಕಾರ್ಮಿಕ ಪರ ನೀತಿಗಳನ್ನು ರದ್ದುಪಡಿಸಿ, ಬಂಡವಾಳಶಾಹಿಗಳಿಗೆ ಕಾನೂನಿನಲ್ಲಿ ಪ್ರಮುಖ ಆದ್ಯತೆ ನೀಡಿ ದುಡಿಯುವ ವರ್ಗವನ್ನು ದುರ್ಬಲಗೊಳಿಸಲಾಗುತ್ತಿದೆ. ಕಾರ್ಮಿಕರು ಒಗ್ಗಟ್ಟಿನಿಂದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ನಾಗೇಶ್ ಮಾತನಾಡಿದರು.
ಅನೇಕ ವರದಿಗಳ ಪ್ರಕಾರ ದೇಶದಲ್ಲಿ 10 ಜನ ಶ್ರೀಮಂತರು ಮಾತ್ರ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ರೈತರು ಹಾಗೂ ಕಾರ್ಮಿಕರ ಮೇಲೆ ಶೋಷಣೆಗಳು ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ದುಡಿಯುವ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ ಎಂದರು.
ಕೋವಿಡ್ ಬಿಕ್ಕಟ್ಟಿನ ನಂತರ ದೇಶವು ಸುಮಾರು 13 ವರ್ಷ ಹಿಂದಕ್ಕೆ ಸಾಗಿದೆ ಎಂದು ಅನೇಕ ಅಧ್ಯಯನದ ಮೂಲಗಳು ಮಾಹಿತಿ ನೀಡುತ್ತಿವೆ. ಬಡತನ, ನಿರುದ್ಯೋಗ, ಕಾರ್ಮಿಕರ ಮೇಲಿನ ಶೋಷಣೆ ಹೆಚ್ಚುತ್ತಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುತ್ತಿರುವ ಸರ್ಕಾರ, ಖಾಸಗೀಕರಣ ಮಾರುವ ಮೂಲಕ ಕಾರ್ಮಿಕ ವರ್ಗವನ್ನು ಶೋಷಣೆ ಮಾಡಿ ಬಂಡವಾಳಶಾಹಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಹುನ್ನಾರದ ವಿರುದ್ಧ ಕಾರ್ಮಿಕ ಸಂಘಟನೆ ಹೋರಾಟ ಮಾಡಬೇಕು ಎಂದರು.
ಪ್ರಾಂತ ರೈತ ಸಂಘದ ಟಿ.ಎಲ್. ಕೃಷ್ಣೇಗೌಡ ಮಾತನಾಡಿ ಬಂಡವಾಳಶಾಹಿಗಳ ಲಾಭಕೋರತನ ದುಡಿಯುವ ವರ್ಗದ ಜನರು, ರೈತರು, ಹಿಂದುಳಿದ ವರ್ಗದವರು, ಮಹಿಳೆಯರಿಗೆ ನೀಡಲಾಗುತ್ತಿದ್ದ ಅನುದಾನದ ಮೊತ್ತವನ್ನು ಕಡಿತ ಗೊಳಿಸಲಾಗಿದೆ. ಶ್ರೀಮಂತರಿಗೆ ಮಣೆ ಹಾಕುತ್ತಿರುವ ಸರ್ಕಾರಗಳು ಬಡವರನ್ನು ನಿರ್ಲಕ್ಷ ಮಾಡುತ್ತಿವೆ. ಇಂತಹ ನೀತಿಗಳನ್ನು ಅರ್ಥಮಾಡಿಕೊಂಡು ಹೋರಾಟ ಮಾಡಬೇಕು ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ, ಅಂಚೆ ನೌಕರರ ಸಂಘದ ಶಿವಣ್ಣ, ವಕೀಲ ಸಂಘದ ಶ್ರೀನಿವಾಸ್, ಮಹದೇವಮ್ಮ ಇತರರು ಇದ್ದರು.