ಪ್ರಸ್ತುತ ದಿನಗಳಲ್ಲಿ ಶುದ್ಧ ಕುಡಿಯುವ ನೀರು ಕೂಡ ಉದ್ಯಮವಾಗುತ್ತಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕಿನ ಕಾರಸವಾಡಿ ಗ್ರಾಮ ಸಮೀಪವಿರುವ ಚಿಕ್ಕಕೆರೆ ಏರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಪರಿಷತ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾವೇರಿ ನೀರಾವರಿ ನಿಗಮ ಹಾಗೂ ಕಾರಸವಾಡಿ ಗ್ರಾಮಸ್ಥರು ಇವರುಗಳ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಜಲಮೂಲಗಳ ಸಂರಕ್ಷಣೆ- ನಮ್ಮೆಲ್ಲರ ಹೊಣೆ ಕಾರ್ಯ ಯೋಜನೆಗೆ ಚಾಲನೆ- ಶ್ರಮದಾನ – ಜಲ ಸಾಕ್ಷರತೆ -ಜಲ ಜಾಗೃತಿ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಮಿಯ ಮೇಲಿನ ಜೀವರಾಶಿಗಳಿಗೆ ನೀರು ಮತ್ತು ಆಹಾರ, ಗಾಳಿ ಅತ್ಯವಶ್ಯಕ, ವಾಸಮಾಡಲು ಮನೆಯಿಲ್ಲದಿದ್ದರೂ ಕುಡಿಯಲು ನೀರು ಅತ್ಯಗತ್ಯ, ಇಂದಿನ ದಿನಗಳಲ್ಲಿ ಜನರು ನೀರು ಕುಡಿಯಲು ಹಣಕೊಟ್ಟು ಬಾಟಲುನೀರನ್ನು ಉಪಯೋಗಿಸುವ ಹಂತಕ್ಕೆ ಬಂದಿದ್ದಾರೆ, ಮನೆ ಖರ್ಚುಗಳ ಲೆಕ್ಕದಲ್ಲಿ ನೀರಿನ ಲೆಕ್ಕವು ಶೇ.೩ರುಷ್ಟು ಸೇರಿಕೊಳ್ಳುತ್ತಿದೆ ಎಂದು ನುಡಿದರು.
ನೀರನ್ನು ಶುದ್ಧಿಕರಿಸಿ ಉದ್ಯಮವಾಗಿ ಬೆಳೆಯುತ್ತಿದೆ, ಇದು ಆಗಾಗಬಾರದು, ಪ್ರಕೃತಿಯಲ್ಲಿ ಸಿಗುವ ನೀರು ಬಾಟಲ್ ವಾಟರ್ಆಗಿದೆ, ಬಿಲಿಯನ್ ವಾಟರ್ ಇಂಡಸ್ಟ್ರಿಯಾಗಿಬಿಟ್ಟಿದೆ, ನೀರು ಚಿನ್ನದ ತರವಾಗುತ್ತಿದೆ, ನೀರಿಗೆ ಹೆಚ್ಚು ಹಣ ಖುರ್ಚುಮಾಡಲು ಸಾಧ್ಯವಿಲ್ಲ, ಇಂತಹ ಜಲಸಾಕ್ಷರತೆ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು, ಎಲ್ಲರ ಸಹಕಾರ ಬೇಕಾಗಿದೆ ಎಂದು ಸಲಹೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಜೆ ನಂಜುಂಡೇಗೌಡ, ಜನಮೂಲ ಎಲ್ಲಾ ಜೀವರಾಶಿಗಳಿಗೆ ಅತ್ಯವಶ್ಯಕ, ಎಲ್ಲರಲ್ಲೂ ಜಲಜಾಗೃತಿಯಾಗಬೇಕಿದೆ, ದೇಶ ನನಗೆನು ಮಾಡಿದ ಎನ್ನುವುದಕಿಂತ ದೇಶಕ್ಕೆ ಎನು ಮಾಡಿದೆ ಎನ್ನುವ ಮನೋಭಾವ ಇರಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿಗಳು ಪರಿಸರ ಪ್ರೇಮಿಗಳು ವಿವಿಧ ಇಲಾಖೆ ಅಧಿಕಾರಿಗಳು ಒಗ್ಗೂಡಿ ಚಿಕ್ಕ ಕೆರೆಯ ಸ್ವಚ್ಛತೆಯನ್ನು ನೆರವೇರಿಸಿದರು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ತೆರವುಗೊಳಿಸಿದರು. ಜೆಸಿಪಿ ಯಂತ್ರದ ಮೂಲಕ ಕೆರೆ ಏರಿಯನ್ನು ಸ್ವಚ್ಛ ಮಾಡಿ ತಾತ್ಕಾಲಿಕ ರಸ್ತೆ ನಿರ್ಮಿಸಿದರು.ಜಲ ಜಾಗೃತಿ ಕುರಿತು ಗಾಯಕ ಹನಿಯಂಬಾಡಿ ಎನ್ ಶೇಖರ್ ಮತ್ತು ತಂಡದಿಂದ ಗೀತ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಸಹಾಯಕ ಪರಿಸರ ಅಧಿಕಾರಿ ಭವ್ಯ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆಎಂ ಲೋಕೇಶ್, ಮಹಿಳಾ ಸರ್ಕಾರಿ ಕಾಲೇಜು ಎನ್ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಎಂ ಕೆಂಪಮ್ಮ, ಫೆವಾರ್ಡ್ ಅಧ್ಯಕ್ಷ ಡಾ. ನಾಗಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ ಎಂ ಬಸವರಾಜು, ಸಂತೆಕಸಲಗೆರೆ ಗ್ರಾ.ಪಂ. ಪಿಡಿಒ ಜಯಪ್ಪ ಬೇವಿನಹಳ್ಳಿ ಗ್ರಾ.ಪಂ. ಪಿಡಿಒ ಚಾಮರಾಜು, ಕಾರ್ಯಕ್ರಮ ಸಂಚಾಲಕರಾದ ಕಾರಸವಾಡಿ ಮಹದೇವು, ರಂಗಸ್ವಾಮಿ ಡಿ ದೇವರಾಜ ಕೊಪ್ಪ, ಲಂಕೇಶ್ ಮಂಗಲ ಮತಿತರರು ಇದ್ದರು.




