Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ ‘ಮೈತ್ರಿ’ ನಡೆಯಿಂದ ನೋವಾಗಿದೆ- ಸಿ.ಎಂ.ಇಬ್ರಾಹಿಂ

“ನಮಗೆ ಮೈತ್ರಿ ಬೇಕಿಲ್ಲ. ಬೇಕಾದರೆ ಅವರೇ ನಮ್ಮ ಬಳಿ ಬಂದು ಚರ್ಚಿಸುತ್ತಾರೆ. ಈವರೆಗೂ ಮೈತ್ರಿ ವಿಚಾರವಾಗಿ ದೇವೇಗೌಡರು ಯಾರನ್ನೂ ಭೇಟಿಯಾಗಿಲ್ಲ. ಕುಮಾರಸ್ವಾಮಿ ಅವರು ಹೋಗಿ ಭೇಟಿಯಾಗಿದ್ದಾರೆ. ಅದೇ ನಮಗೆಲ್ಲ ನೋವಾಗಿರುವುದು. ಪಕ್ಷದ ರಾಜ್ಯಾಧ್ಯಕ್ಷ ನಾನು. ನನಗೆ ಒಂದು ಹೇಳಲಿಲ್ಲ. ಹೇಳಿದ್ದರೆ ನಾನು ಸಲಹೆ ಕೊಟ್ಟು ಕಳುಹಿಸುತ್ತಿದ್ದೆ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಅಕ್ಟೋಬರ್ 16 ರಂದು ಚಿಂತನ ಮಂಥನ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವೆ” ಎಂದು ತಿಳಿಸಿದರು.

ಬಿಜೆಪಿ ಜೊತೆಗೆ ಜೆಡಿಎಸ್‌ ಮೈತ್ರಿಯ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಮುಂದಿನ ನಡೆ ಏನು ಎಂದು ಎಲ್ಲೆಡೆ ಪ್ರಶ್ನೆಗಳು ವ್ಯಕ್ತವಾಗಿದ್ದು, ಈ ವಿಚಾರವಾಗಿ ಸ್ವತಃ ಇಬ್ರಾಹಿಂ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

“ನಾನು ಏನೇ ನಿರ್ಧಾರ ಕೈಗೊಂಡರು ಕುಮಾರಸ್ವಾಮಿ ಮತ್ತು ದೇವೇಗೌಡರ ಗಮನಕ್ಕೆ ತಂದೆ ನಿರ್ಧಾರ ತೆಗೆದುಕೊಳ್ಳುವೆ. ಮುಸ್ಲಿಂ ನಾಯಕರಾರು ಇನ್ನೂ ಪಕ್ಷ ತೊರೆದಿಲ್ಲ. ಬೇಸರದಿಂದ ಪಕ್ಷ ತೊರೆಯುವ ಮಾತುಗಳನ್ನಾಡುತ್ತಿದ್ದಾರೆ” ಎಂದರು.

ಕಾಂಗ್ರೆಸ್‌ನವರು ತಮ್ಮನ್ನು ಸಂಪರ್ಕಿಸಿದ್ದಾರೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಯಾರೂ ಈವರೆಗೂ ಸಂಪರ್ಕ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಯಾವುದೇ ವಿಚಾರ ನನ್ನ ಜೊತೆ ಮಾತನಾಡಿಲ್ಲ. ದೆಹಲಿಯ ಕಾಂಗ್ರೆಸ್‌ ನಾಯಕರು ಮಾತನಾಡಿದ್ದಾರೆ. ನಾಯಕರ ಅಭಿಪ್ರಾಯ ತೆಗೆದುಕೊಂಡು ತಿಳಿಸುವೆ ಎಂದಿದ್ದೇನೆ” ಎಂದರು.

“ಶರದ್ ಪವಾರ್‌ ಮಾತನಾಡಿದ್ದಾರೆ. ಆಪ್‌ ಕಡೆಯಿಂದಲೂ ಕರೆ ಬಂದಿದೆ. ತಂದೆಯ ಸಮಾನರಾದ ದೇವೇಗೌಡರು ಇದ್ದಾರೆ. ಅವರ ಅಭಿಪ್ರಾಯ ಮುಖ್ಯ. ನಾನು ಜನತಾದಳ ಸೇರಲು ಅವರೇ ಕಾರಣ. ಎಂಎಲ್‌ಸಿ ಬಿಟ್ಟು ಹೋದೆ. ಕಾರಣ ಕುವೆಂಪು ಅವರ ಸಿದ್ಧಾಂತವನ್ನು ದೇವೇಗೌಡರು ಎತ್ತಿಹಿಡಿದಿದ್ದಾರೆ. ಜೆಡಿಎಸ್‌ ಸೇರಿ ನಾನು ತಪ್ಪು ಮಾಡಿದೆ ಎನ್ನುವ ಅಭಿಪ್ರಾಯ ನನ್ನಲ್ಲಿ ಮೂಡಿಲ್ಲ” ಎಂದು ಹೇಳಿದರು.

”ಮೈತ್ರಿ ಬಗ್ಗೆ ಈಗಾಗಲೇ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ಇದು ಸರಿಯಾ? ನಿತೀಶ್‌ ಕುಮಾರ್‌ ಜೊತೆ ಹೋಗಬೇಕೋ? ಶರದ್ ಪವಾರ್‌ ಜೊತೆ ಹೋಗಬೇಕೋ ಅಥವಾ ಆಪ್‌ ಜೊತೆ ಹೋಗಬೇಕೋ ಇಲ್ಲವೇ ಕಾಂಗ್ರೆಸ್‌ ಜೊತೆ ಹೋಗಬೇಕೋ ಅಥವಾ ಎಲ್ಲ ಬಿಟ್ಟು ಈ ಪಾರ್ಟಿ ಇಟ್ಟುಕೊಂಡು ಇದನ್ನೇ ಕಟ್ಟಬೇಕೋ? ಅಥವಾ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಮನವೊಲಿಸಬೇಕೋ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಸಭೆಯಲ್ಲಿ ಚರ್ಚಿಸಲಾಗುವುದು” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!