Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮುನಿರತ್ನ ದಲಿತ- ಒಕ್ಕಲಿಗ ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ, ಇದು ಗಂಭೀರ ಅಪರಾಧ: ಸಿಎಂ ಸಿದ್ದರಾಮಯ್ಯ

40% ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ. ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಮುನಿರತ್ನ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಜಾತಿ ನಿಂದನೆ ಮಾಡಿ, ಪತ್ನಿ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಕ್ಸ್‌ ತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ” ಎಂದು ಕುಟುಕಿದ್ದಾರೆ.

“ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ. ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣರು. ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳು ಸಾಕ್ಷಿ” ಎಂದು ವ್ಯಂಗ್ಯವಾಡಿದ್ದಾರೆ.

“ವೈರಲ್‌ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ” ಎಂದಿದ್ದಾರೆ.

“ಮಾಧ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯಾ” ಎಂದು ಪ್ರಶ್ನಿಸಿದ್ದಾರೆ.

“ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ. ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು” ಎಂದು ಹೆಳಿದ್ದಾರೆ.

ಗುತ್ತಿಗೆದಾರ ಚಲುವರಾಜು ಸಿಎಂಗೆ ದೂರು

“ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿ ಅಸಹ್ಯವಾಗಿ ವರ್ತಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಎಫ್‌ಐಆರ್‌ ಆದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಒತ್ತಾಯಿಸಿ ಗುತ್ತಿಗೆದಾರ ಚಲುವರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!