ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ, ಕೋಮು ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ತುರ್ತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯದ ಗಂಭೀರತೆಯನ್ನು ಅರ್ಥ ಮಾಡಿಸುವುದು ಹಾಗೂ ಮಂಗಳೂರಿನಲ್ಲಿ ಬೃಹತ್ ‘ಸೌಹಾರ್ದ ಸಮ್ಮೇಳನ’ ನಡೆಸುವ ಎರಡು ಪ್ರಮುಖ ನಿರ್ಧಾರವನ್ನು ಸಮಾನ ಮನಸ್ಕರ ಸಭೆ ತೀರ್ಮಾನಿಸಿದೆ.
ಯಾವ ಬೆಲೆ ತೆತ್ತಾದರೂ ಕೋಮು ಹಿಂಸೆ ತಡೆಯೋಣ ಘೋಷಣೆಯೊಂದಿಗೆ ಬೆಂಗಳೂರಿನ ಆಶೀರ್ವಾದ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸಾಹಿತಿಗಳು, ಚಿಂತಕರು, ಹೋರಾಟಗಾರರು ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಹಿಂಸೆ ಹೆಚ್ಚುತ್ತಿದೆ. ಅದು ಇತ್ತೀಚೆಗೆ ಭೀಕರ ಸ್ವರೂಪವನ್ನು ಪಡೆಯುತ್ತಿದೆ ಒಂದೇ ಊರಿನ ಒಟ್ಟಿಗೆ ಕೆಲಸ ಮಾಡುತ್ತಿದ್ದ ಪರಸ್ಪರ ಸಹಾಯ ಸಹಕಾರ ಮಾಡುತ್ತಿದ್ದವರನೇ ಮೋಸದಿಂದ ಕರೆಸಿ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡುವ ಹಂತಕ್ಕೆ ಬಂದು ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಪ್ರಯೋಗ ರಾಜ್ಯದ ಇತರ ಜಿಲ್ಲೆಗೂ ಪಸರಿಸುವ ಅಪಾಯವೂ ಇದೆ. ಹಾಗಾಗಿ ಅದನ್ನು ತಡೆಯುವ ತುರ್ತು ಅನಿವಾರ್ಯ ಇದೆ. ಆ ನಿಟ್ಟಿನಲ್ಲಿ ತುರ್ತು ಹಾಗೂ ದೀರ್ಘ ಕಾಲದ ಕಾರ್ಯ ಯೋಜನೆ ನಡೆಸುವ ಅಗತ್ಯದ ಬಗ್ಗೆ ಸಭೆ ಚರ್ಚೆ ನಡೆಸಿತು.
ಸುದೀರ್ಘ ಚರ್ಚೆಯ ಬಳಿಕ ಸಭೆ ತುರ್ತಾಗಿ ಮಾಡಬೇಕಾದ ಎರಡು ತೀರ್ಮಾನಗಳನ್ನು ತೆಗೆದುಕೊಂಡಿದೆ. ಮೊದಲನೆಯದ್ದಾಗಿ ಹತ್ತು ಹದಿನೈದು ದಿನಗಳ ಒಳಗೆ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅವರಿಗೆ ಜಿಲ್ಲೆಯ ಪರಿಸ್ಥಿತಿಯ ಗಂಭೀರತೆಯನ್ನು ಅರ್ಧ ಮಾಡಿ ಕೊಡುವುದು ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಮೊದಲು ಜಿಲ್ಲೆಯ ಹಿಂದು ಮುಸ್ಲಿಮ್ ಸೌಹಾರ್ದದ ಪರಂಪರ, ಇತರ ಜಾತಿಗಳು ಮತ್ತು ಮುಸ್ಲಿಮರ ನಡುವಿನ ಬಾಂಧವ್ಯದ ಇತಿಹಾಸ ಹಾಗೂ ಪ್ರಸಕ್ತ ಜಿಲ್ಲೆಯ ಪರಿಸ್ಥಿತಿಯ ಸಮಗ್ರ ಮಾಹಿತಿಯನ್ನು ಸಿದ್ಧಪಡಿಸಲು ಸಭೆ ನಿರ್ಧರಿಸಿತು. ಅಲ್ಲದೆ ತುರ್ತಾಗಿ ಸರಕಾರ ಮಾಡಬೇಕಾದ ಪರಿಣಾಮಕಾರಿ ಕಾರ್ಯದ ಬಗ್ಗೆ ಮುಖ್ಯಮಂತ್ರಿಗೆ ತಿಳಿಸಿ ಕೂಡಲೇ ಅದನ್ನು ಮಾಡಲು ಒತ್ತಾಯ ಮಾಡುವಂತೆ ಸಭೆ ತೀರ್ಮಾನಿಸಿದೆ.
ಎರಡನೆಯದ್ದಾಗಿ ಮಂಗಳೂರಿನಲ್ಲಿ ಸರ್ವ ಧರ್ಮಿಯರ ಬೃಹತ್ ಸೌಹಾರ್ದ ಸಮ್ಮೇಳನ ನಡೆಸಲು ತೀರ್ಮಾಣ ಮಾಡಲಾಯಿತು ಈ ಸಮ್ಮೇಳನಕ್ಕೆ ಕಳೆದ ಒಂದೆರಡು ದಶಕದಲ್ಲಿ ಜಿಲ್ಲೆಯಲ್ಲಿ ಹತ್ಯೆಯಾದವರ ತಂದೆ, ತಾಯಿ, ಪತ್ನಿ ಮಕ್ಕಳನ್ನು ವೇದಿಕೆಗೆ ಕರೆಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಭೆ ನಡೆಸಿ ಸಮ್ಮೇಳನದ ಕಾರ್ಯಯೋಜನೆ ರೂಪಿಸಲು ಸಭೆ ತೀರ್ಮಾನಿಸಿತು. ಇದಲ್ಲದೆ ಯುವ ಜನರಲ್ಲಿ ವಿದ್ಯಾರ್ಥಿಗಳಲ್ಲಿ ಸೌಹಾರ್ದ ಪರಂಪರ ಮೂಡಿಸಲು ಸುದೀರ್ಘ ಕಾರ್ಯ ಯೋಜನೆಯನ್ನು ಹಮ್ಮಿಕೊಳ್ಳಲು ಸಭೆ ತೀರ್ಮಾನಿಸಿದೆ.
ಸಭೆಯಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆ, ದಿನೇಶ್ ಅಮೀನ್ ಮಟ್ಟು, ಎಸ್.ಬಾಲನ್, ಮುನೀರ್ ಕಾಟಿಪಳ್ಳ ಎನಾರಾಯಣ, ಕೆ.ಎಸ್.ವಿಮಲಾ, ಶಶಿಧರ ಭಾರಿಘಾಟ್, ನಿಯಾಝ್, ಸಾತಿ ಸುಂದರೇಶ್, ಜ್ಯೋತಿ ಅನಂತ ಸುಬ್ಬರಾವ್, ಡಾ. ವಾಸು, ಫಾ. ಪ್ರಶಾಂತ್ ಮಾಡ್ಯಾ ಎನ್.ಎಸ್.ಅಂಗಡಿ, ವಿನಯ್ ಶ್ರೀನಿವಾಸ್, ಮಾನ್ವಿ ಹರ್ಷ ಕುಮಾರ್ ಕುಗೈ ರಾ ಚಿಂತನ್, ಗೀತಾ, ಅಖಿಲಾ ವಿದ್ಯಾಸಂದ್ರ ನಿಕೇತ್ ರಾಜ್ ಮೌರ್ಯ, ಭವ್ಯ ನರಸಿಂಹಮೂರ್ತಿ ಸಹಿತ ಸಾಹಿತಿಗಳು, ಚಿಂತಕರು, ಹೋರಾಟಗಾರರು 150ರಷ್ಟು ಮಂದಿ ಭಾಗವಹಿಸಿದರು.




