Friday, May 17, 2024

ಪ್ರಾಯೋಗಿಕ ಆವೃತ್ತಿ

ಆಪರೇಷನ್ ಬಂಡಾಯ | ಜೆಡಿಎಸ್ ಅಭ್ಯರ್ಥಿ ರಾಮಚಂದ್ರುಗೆ ನಗರಸಭೆಯ 20 ಸದಸ್ಯರ ಬೆಂ’ಬಲ’

ಮಂಡ್ಯ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಅವರಿಗೆ ಜೆಡಿಎಸ್ ಪಕ್ಷ ಬಿ.ಫಾರಂ ನೀಡುತ್ತಿದ್ದಂತೆ ಜೆಡಿಎಸ್ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿದೆ.

ಟಿಕೆಟ್ ಆಕಾಂಕ್ಷಿಗಳಾಗಿ ಕೆ.ಎಸ್.ವಿಜಯ್ ಆನಂದ್, ಹೆಚ್.ಎನ್.ಯೋಗೇಶ್ ಹಾಗೂ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಅವರು ತಮ್ಮ ಪಕ್ಷದ ವರಿಷ್ಟರ ವಿರುದ್ಧವೇ ಬಂಡಾಯ ಸಾರಿ ಅಂತಿಮವಾಗಿ ಕೆ.ಎಸ್.ವಿಜಯ್ ಆನಂದ್ ಅವರನ್ನು ತಮ್ಮ ಒಮ್ಮತದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲೇ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಜಪ್ರುಲ್ಲಾಖಾನ್ ‘ಆಪರೇಷನ್ ಬಂಡಾಯ’ ತಂತ್ರದ ಮೂಲಕ ಶಾಸಕ ಎಂ.ಶ್ರೀನಿವಾಸ್ ಅವರೊಂದಿಗೆ ಗುರುತಿಸಿಕೊಂಡಿದ್ದ ಮಂಡ್ಯ ನಗರಸಭಾಧ್ಯಕ್ಷ ಹೆಚ್.ಎಸ್.ಮಂಜು ಸೇರಿದಂತೆ 20 ಮಂದಿ ನಗರಸಭಾ ಸದಸ್ಯರನ್ನು ಒಟ್ಟಿಗೆ ಕೂರಿಸಿ ಮಾತುಕತೆ ನಡೆಸುವ ಮೂಲಕ ಒಂದು ಹಂತದ ಬಂಡಾಯವನ್ನು ಶಮನ ಮಾಡಿ, ಜೆಡಿಎಸ್ ಅಧಿಕೃತ ಅಭ್ಯರ್ಥಿ ಬಿ.ಆರ್. ರಾಮಚಂದ್ರು ಅವರ ಪರ ಕೆಲಸ ಮಾಡುವಂತೆ ಮಾನಸಿಕವಾಗಿ ಸಿದ್ದಗೊಳಿಸಿದ್ದಾರೆ.

ನಿನ್ನೆಯಷ್ಟೆ ಬಿ.ಆರ್.ರಾಮಚಂದ್ರು ಅವರು ಶಾಸಕ ಎಂ.ಶ್ರೀನಿವಾಸ್ ಹಾಗೂ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ ಶಾಸಕ ಎಂ.ಶ್ರೀನಿವಾಸ್ ಬೆಂಬಲ ನೀಡಲು ನಿರಾಕರಿಸಿ, ಸೋಮವಾರವಷ್ಟೆ ಮತ್ತೇ ಸಭೆ ನಡೆಸಿ ಸ್ವಾಭಿಮಾನಿ ಬಣದಿಂದ ಕೆ.ಎಸ್.ವಿಜಯ್ ಆನಂದ್ ಅವರನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಜಪ್ರುಲ್ಲಾಖಾನ್ ಅವರು ಆಪರೇಷನ್ ಬಂಡಾಯಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ
ಈ ಸಂದರ್ಭದಲ್ಲಿ ಜಫ್ರುಲ್ಲಾಖಾನ್ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ, ಎಲ್ಲಾ 20 ಮಂದಿ ಸದಸ್ಯರು ಪಕ್ಷದ ವರಷ್ಠರಾದ ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ನಾವೆಲ್ಲ ದುಡಿಯುತ್ತೇವೆಂದರು.

ಎಂ.ಶ್ರೀನಿವಾಸ್ ಅಳಿಯನಿಗೆ ಮಾತ್ರ ಟಿಕೆಟ್ ಕೇಳಿದ್ರು
ಶಾಸಕ ಎಂ.ಶ್ರೀನಿವಾಸ್ ಅವರು ಮೂರು ಬಾರಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ತಮ್ಮ ಅಳಿಯ ಹೆಚ್.ಎನ್. ಯೋಗೇಶ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಇನ್ಯಾರಿಗೂ ಟಿಕೆಟ್ ಕೇಳಿರಲಿಲ್ಲ. ಮೂವರು ಆಕಾಂಕ್ಷಿಗಳಿಂದ ನಾಮಪತ್ರ ಹಾಕಿಸಿದ್ದರು. ಆದರೆ ಕೆ.ಎಸ್.ವಿಜಯ್ ಆನಂದ್ ಅವರನ್ನು ಸ್ವಾಭಿಮಾನಿ ಬಣ ಅಭ್ಯರ್ಥಿ ಎಂದು ಘೋಷಿಸಿ ಅವರನ್ನು ಬಲಿಪಶು ಮಾಡಲು ಹೊರಟ್ಟಿದ್ದಾರೆ, ನಮ್ಮಲ್ಲಿ ಯಾವುದೇ ಆಂತರಿಕ ಕಲಹಗಳಿಲ್ಲ, ಈ ಭಿನ್ನಾಭಿಪ್ರಾಯ ಉಂಟಾಗಲು ಶಾಸಕ ಎಂ.ಶ್ರೀನಿವಾಸ್ ಅವರೇ ಕಾರಣ ಎಂದು ದೂರಿದರು.

ಈ ಸಂದರ್ಭದಲ್ಲಿ ಮಂಡ್ಯ ನಗರ ಜೆಡಿಎಸ್ ಘಟಕದ ಅಧ್ಯಕ್ಷ ಗೌರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!