Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೊಬ್ಬರಿ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ: ನಂದಿನಿ ಜಯರಾಮ್ ಆಕ್ರೋಶ

ಕೊಬ್ಬರಿ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳೇ ಕಾರಣ ಎಂದು ರೈತ ನಾಯಕಿ ನಂದಿನಿ ಜಯರಾಮ್ ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ ತಾಲ್ಲೂಕಿನ ಕದಬಹಳ್ಳಿಯ ಕಾವೇಟಿ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗ ಶನಿವಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ತೆಂಗು ಬೆಳೆಗಾರರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಿತೃ ಪಕ್ಷ ಆಚರಿಸುವ ನಾವೀಗ ಪುತೃ ಪಕ್ಷ ಆಚರಿಸುವಂತಾಗಿದೆ.ರೈತರ ಬದುಕು ದುಸ್ತರವಾಗಿದೆ.ರೈತರ ಮಕ್ಕಳಿಗೆ ಹೆಣ್ಣು ನೀಡದಂತಾಗಿದೆ ಎನ್ನುವ ಮೂಲಕ ರೈತರ ದಾರುಣ ಬದುಕನ್ನು ತೆರೆದಿಟ್ಟರು.

ರೈತಾಪಿ ವರ್ಗ ಬೆಲೆ ಕುಸಿತದಿಂದ ಕಂಗಲಾಗಿದೆ. ರೈತನ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಮದ್ದೂರು ತಾಲ್ಲೂಕಿನ 35 ವರ್ಷದ ಯುವ ರೈತ ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ನನ್ನ ತವರೂರಿನಲ್ಲಿ 23 ಜನ 35 ವರ್ಷ ಆದ ಯುವಕರು ಹೆಣ್ಣು ಸಿಗದೆ ಮದುವೆಯನ್ನೆ ಆಗಿಲ್ಲ. ಹೀಗಾದರೆ ನಾವು ಪಿತೃ ಪಕ್ಷದ ಬದಲು ಪುತೃ ಪಕ್ಷ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ರೈತನ ಬದುಕಿನ ಸಮಸ್ಯೆಯ ಅನಾವರಣ ಮಾಡಿದರು. ನಮ್ಮ ಮಗಳ ಕೈ ಸಗಣಿಯಾಗುತ್ತದೆ, ಮಣ್ಣು ಮೆತ್ತಿಕೊಳ್ಳುತ್ತಿದೆ ಎಂದು ರೈತನ ಮಕ್ಕಳಿಗೆ ಹೆಣ್ಣು ಕೊಡುವುದನ್ನೆ ನಿಲ್ಲಿಸಿದ್ದಾರೆ. ಇಂಥ ಜೀವನ ಬೇಕಾ ನಮಗೆ. ಈ ಬಗ್ಗೆ ಸರ್ಕಾರಗಳು ತೀವ್ರ ನಿರ್ಲಕ್ಷ ತೋರುತ್ತಿವೆ. ಅವರನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು.

ಕೊಬ್ಬರಿ ಬೆಲೆ ಕುಸಿಯಲು ಕೇಂದ್ರ ಸರ್ಕಾರದ ನೀತಿಯೇ ಕಾರಣ. ಹೊರದೇಶದಿಂದ ತೆರಿಗೆ ಮುಕ್ತವಾಗಿ ಅಡಿಗೆ ಎಣ್ಣೆ ಆಮದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಕೊಬ್ಬರಿ ಧಾರಣೆ ಕುಸಿದು ಅದನ್ನೆ ನಂಬಿ ಜೀವನ ಮಾಡುವ ರೈತ ಬೀದಿಗೆ ಬಿದ್ದಿದ್ದಾನೆ.‌ಆದ್ದರಿಂದ ರೈತರು ಪ್ರಜ್ಞಾವಂತರಾಗಬೇಕೆಂದರು.

ಇಂತಹ ಪ್ರತಿಭಟನೆಗಳು ಆಗಾಗ ನಡೆಯಬೇಕು. ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುವುದರ ವಿರುದ್ದ ನಾವು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮನ್ನು ಹೊಸಕಿ ಹಾಕುತ್ತಾರೆ ಆ ಬಗ್ಗೆ ನಾವು ಧ್ವನಿ ಎತ್ತಬೇಕು ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ 2011 ರಿಂದ ಮೂರು ವರ್ಷ ಸತತ ಬರದಿಂದ ತೆಂಗಿನ ಮರಗಳು ನಶಿಸುವ ಹಂತಕ್ಕೆ ಬಂದಾಗ ಗೋರಕ್ ನಾಥ ಸಮಿತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಿತು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿತು. ಈ ಬಗ್ಗೆ ನಮ್ಮ ಹೋರಾಟವಿರಬೇಕು. ಕೇರಳ ರಾಜ್ಯ ಸರ್ಕಾರ ತೆಂಗಿನ ಮರದಿಂದ ನೀರಾ ಇಳಿಸಲು ಮುಕ್ತ ಅವಕಾಶ ನೀಡಿದೆ. ನೀರಾ ಶೀಥಲೀಕರಣ ವ್ಯವಸ್ಥೆಯಲ್ಲಿ ಇಟ್ಟು ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಸೇವಿಸಬಹುದು. ಇದನ್ನು ಬಳಸುವುದರಿಂದ ಯಾವುದೇ ಪುಷ್ಠಿವರ್ಧಕಗಳು ದೇಹಕ್ಕೆ ಬೇಕಿಲ್ಲ. ನೀರಾದಿಂದಲೇ ಉಪಯುಕ್ತ ಪೋಷಕಾಂಶ ದೇಹಕ್ಕೆ ದೊರೆಯುತ್ತದೆಂದರು. ಇದಕ್ಕೆ ರಾಜ್ಯ ಸರ್ಕಾರವು ಅವಕಾಶ ಮಾಡಿಕೊಡಬೇಕೆಂದರು. ಎಳನೀರಿಗೆ ಬೇಡಿಕೆ ಇಲ್ಲದಿದ್ದರೆ ನಮ್ಮ ತೆಂಗಿನಕಾಯಿಯನ್ನು 2 ರೂ ಗೂ ಕೇಳುತ್ತಿರಲಿಲ್ಲವೆಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೂಡ್ಲಪ್ಪ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಣ್ಣು ತೆರೆಸಲು ನಮ್ಮ ಹೋರಾಟ. ಕಳೆದ ವರ್ಷ ಕೊಬ್ಬರಿ ಬೆಲೆ 19,500 ಇತ್ತು. ಆದರೆ ಈ ವರ್ಷ 7,500 ರೂ ಗೆ ಇಳಿದಿದೆ. ಅದಾನಿ, ಮಲ್ಯ, ನೀರವ್ ಮೋದಿಯ ಲಕ್ಷಾಂತರ ಕೋಟಿ ಹಣವನ್ನು ಮನ್ನಾ ಮಾಡಲಾಗಿದೆ.ಸರ್ಕಾರ ಆವರ್ತ ನಿಧಿಯನ್ನಿಟ್ಟು ರೈತರನ್ನು ಉಳಿಸಿ ಎಂದು ಒತ್ತಾಯಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ರೈತ ಹೋರಾಟ ಮಾಡದಿದ್ದರೆ ಏನು ದಕ್ಕುವುದಿಲ್ಲವೆಂದರು. ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಗೊಬ್ಬರದ ಬೆಲೆ 1,500ರೂ ಆಗಿದ್ದು, ಯಾವ ರೈತರು ಚಕಾರ ಎತ್ತುತ್ತಿಲ್ಲ. ಕೊಬ್ಬರಿ ಕುಸಿತದ ಬಗ್ಗೆ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ರೈತ ತಿರುಗಿಬಿದ್ದರೆ ಯಾವ ಸರ್ಕಾರವು ಉಳಿಯುವುದಿಲ್ಲವೆಂದರು.

ಜಿ.ಪಂ.ಮಾಜಿ ಸದಸ್ಯ ಎನ್.ಎಂ.ರಾಮಸ್ವಾಮಿಗೌಡ ಮಾತನಾಡಿ, ತೆಂಗು ಬೆಳೆಯುವ ರೈತನ ಸ್ಥಿತಿ ಇಂದು ಚಿಂತಾಜನಕವಾಗಿದೆ, ಸಸಿ ನೆಟ್ಟು ಎಂಟು ವರ್ಷ ಕಾದು ಫಸಲು ಬರುವ ವೇಳೆಗೆ ಕೊಬ್ಬರಿಗೆ ಬೆಲೆ ಇಲ್ಲದೆ ಇದ್ದರೆ ರೈತನ ಪರಿಸ್ಥಿತಿ ಏನಾಗಬೇಡ. ನಿಖರ ಬೆಲೆ ನೀಡುವಂತೆ ನಾವು ಹೋರಾಟ ಮಾಡಬೇಕಿದೆ. ಇದು ನಮ್ಮ ಹಕ್ಕು ಎಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀರಂಗಪುರ ರಂಗೇಗೌಡ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಯೋಗೇಶ್, ಜಿ.ಪಂ.ಮಾಜಿ ಸದಸ್ಯ ಶಿವಪ್ರಕಾಶ್, ರೈತ ಸಂಘದ ಪದಾಧಿಕಾರಿಗಳಾದ ದಡಗ ಸತೀಶ್, ಹರಳಕೆರೆ ಗೋಪಾಲಕೃಷ್ಣ, ದಸಂಸ ಮುಖಂಡರಾದ ಮುಳಕಟ್ಟೆ ಶಿವರಾಮಯ್ಯ, ಕಂಚಿನಕೋಟೆ ಮೂರ್ತಿ, ಮಂಜು, ಕೆಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ರಮೇಶ್ ಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಅಣೆಚನ್ನಾಪುರ ಮಂಜೇಶ್, ಹಡೇನಹಳ್ಳಿ ರಮೇಶ್, ವಿಎಸ್ಎಸ್ ಎನ್ ಮಾಜಿ ಅಧ್ಯಕ್ಷ ಶಿಖರನಹಳ್ಳಿ ದೊರೆ ಸೇರಿದಂತೆ 500 ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!