Thursday, September 19, 2024

ಪ್ರಾಯೋಗಿಕ ಆವೃತ್ತಿ

”ಕಾಲಹರಣ” ಮಾಡುವ ಸರ್ಕಾರಿ ಅಧಿಕಾರಿಗಳು- ನೌಕರರ ಮೇಲೆ ಶಿಸ್ತುಕ್ರಮ: ಜಿಲ್ಲಾಧಿಕಾರಿ ಆದೇಶ

ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಕೆಲ ಅಧಿಕಾರಿ, ಸಿಬ್ಬಂದಿ ಸುಖಾಸುಮ್ಮನೆ ಹೊರಗೆ ತಿರುಗಾಡುವುದು ಹಾಗೂ ಟೀ, ಕಾಫಿ ಕುಡಿಯುವ ನೆಪದಲ್ಲಿ ಕಾಲಹರಣ ಮಾಡುವುದು. ಜತೆಗೆ ಇಷ್ಟಬಂದಾಗ ಬರುವುದು, ಹೋಗುತ್ತಾರೆನ್ನುವ ಆರೋಪದ ಹಿನ್ನೆಲೆಯಲ್ಲಿ ಇವಕ್ಕೆಲ್ಲ ಬ್ರೇಕ್ ಹಾಕಲು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ಎಲ್ಲಾ ಅಧಿಕಾರಿಗಳು, ನೌಕರರು ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.

ಸಮಯ ಪಾಲನೆ ಮಾಡದಿದ್ದರೆ ಶಿಸ್ತು ಕ್ರಮ 

ಅಧಿಕಾರಿ, ಸಿಬ್ಬಂದಿ ವಿಚಾರದಲ್ಲಿ ಗಂಭೀರವಾಗಿ ಕೇಳಿಬರುವ ಆರೋಪ ಸಮಯಪಾಲನೆ ಮಾಡದಿರುವುದು. ಎಲ್ಲ ಇಲಾಖೆಯಲ್ಲಿಯೂ ಕೆಲ ಅಧಿಕಾರಿ, ಸಿಬ್ಬಂದಿ ಇದನ್ನು ರೂಢಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಈ ಬಗ್ಗೆ ಪ್ರಶ್ನಿಸಿದರೆ ಮೀಟಿಂಗ್‌ಗೆ ಹೋಗಿದ್ದಾರೆ, ಕೆಲಸದ ಮೇಲೆ ಹೊರಗೆ ಹೋಗಿದ್ದಾರೆನ್ನುವ ಸಿದ್ಧ ಉತ್ತರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಮುಖವಾಗಿ ಕಚೇರಿಯ ನಿಗದಿತ ಅವಧಿಯಲ್ಲಿ ಸಮಯ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡುವ ಹೊಣೆಯನ್ನು ಇಲಾಖೆ ಮುಖ್ಯಸ್ಥರಿಗೆ ನೀಡಲಾಗಿದೆ. ಕರ್ತವ್ಯದ ವೇಳೆಯಲ್ಲಿ ಟೀ, ಕಾಫಿಗೆಂದು ಸಿಬ್ಬಂದಿ ವರ್ಗ ಕಚೇರಿಯಿಂದ ಹೊರಗಡೆ ಹೋಗದಂತೆ ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಪ್ರತಿ ಕಚೇರಿಯಲ್ಲಿಯೂ ಚಲನ-ವಲನ ವಹಿ ನಿರ್ವಹಿಸಿ, ಸಿಬ್ಬಂದ ವರ್ಗದ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ಸೂಚನೆ ಪಾಲನೆ ಮಾಡುವ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳು, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಕಚೇರಿ ಸಹಾಯಕರು ಹಾಗೂ ಶಾಖಾ ಮುಖ್ಯಸ್ಥರಿಗೆ ಆದೇಶ ನೀಡಲಾಗಿದೆ.

ಸರ್ಕಾರಿ ಅಧಿಕಾರಿ, ಸಿಬ್ಬಂದಿ ಆಟಾಟೋಪಕ್ಕೆ ಮಂಡ್ಯ ಜಿಲ್ಲಾಧಿಕಾರಿ ಬ್ರೇಕ್: ಬಯೋಮೆಟ್ರಿಕ್ ಕಡ್ಡಾಯ, ಕಚೇರಿ ಸಮಯದಲ್ಲಿ ಟೀ/ಕಾಫಿ ಕುಡಿಯಲು ಹೋಗುವಂತಿಲ್ಲ

ಬಯೋಮೆಟ್ರಿಕ್ ಅಳವಡಿಕೆಗೆ ಕ್ರಮ

ಎಲ್ಲ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಅಳವಡಿಸಬೇಕು. ಅಲ್ಲದೆ ಕಚೇರಿಯ ಮುಖ್ಯಸ್ಥರು ಪ್ರತಿ ವಾರಕ್ಕೊಮ್ಮೆ ಹಾಜರಾತಿಯನ್ನು ಪರಿಶೀಲನೆ ಮಾಡಬೇಕಿದೆ. ಮಾತ್ರವಲ್ಲದೆ ಶಾಖೆಗಳಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಇದರೊಟ್ಟಿಗೆ ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು. ಅಂತೆಯೇ ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ, ಸಿಬ್ಬಂದಿ ಹೆಸರು, ಪದನಾಮ ಸೂಚಿಸುವ ನಾಮಫಲಕ ಅಳವಡಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ.

ಬೇಕಾಬಿಟ್ಟಿ ವಾಹನ ಬಳಕೆಗೆ ನಿರ್ಬಂಧ

ಕೆಲ ಅಧಿಕಾರಿ, ಸಿಬ್ಬಂದಿ ಸರ್ಕಾರಿ ಕೆಲಸಕ್ಕೆಂದು ನೀಡಿರುವ ವಾಹನವನ್ನು ಅನಧಿಕೃತವಾಗಿ ಬಳಸುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕೆಲಸಕ್ಕಾಗಿ ಒದಗಿಸಲಾಗಿರುವ ವಾಹನ ಹಾಗೂ ಹೊರಗುತ್ತಿಗೆ ಆಧಾರದ ವಾಹನ ಸೌಲಭ್ಯವನ್ನು ಪಡೆದುಕೊಂಡಿರುವ ಪ್ರತಿ ಕಚೇರಿಯಲ್ಲಿಯೂ ಕರ್ತವ್ಯ ಮುಗಿದ ಬಳಿಕ ನಿಗದಿತ ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನ ನಿಲ್ಲಿಸುವ ವ್ಯವಸ್ಥೆಯನ್ನು ಮಾಡಬೇಕಿದೆ. ಅಲ್ಲದೆ ಹೊರಗುತ್ತಿಗೆ ಆಧಾರದ ವಾಹನ ಸೌಲಭ್ಯ ಪಡೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಆ ವಾಹನದ ಮೇಲೆ ಅಧಿಕಾರಿಯ ಪದನಾಮ ಮತ್ತು ಸರ್ಕಾರದ ಉದ್ದೇಶಕ್ಕೆ ಎಂಬ ನಾಮಫಲಕವನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!