ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಸಂತೆಬಾಚೇನಹಳ್ಳಿ ಹೋಬಳಿಯಲ್ಲಿ 212 ಕೋಟಿ ರೂ ಹಾಗೂ ಬೂಕನಕೆರೆಯಲ್ಲಿ 265 ಕೋಟಿ ರೂ.ವೆಚ್ಚದ 2 ಏತ ನೀರಾವರಿ ಯೋಜನೆಗಳನ್ನು ಮಂಜೂರಾತಿ ಮಾಡಲಾಗಿದೆ. 11 ಕೆರೆ ತುಂಬಿಸಲು 25 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಜೀವನದಿಯಾಗಿರುವ ಕಾವೇರಿ,ಹೇಮಾವತಿ ಇವುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಹೇಮಾವತಿ ಮತ್ತು ಎಡದಂಡೆ ನಾಲೆಯ ಕೆಲಸಕ್ಕೆ ಬೇಕಾದ ಅನುದಾನವನ್ನು ನೀಡಿ ಕೆಲಸವನ್ನು ಆದಷ್ಟು ಬೇಗ ಮುಗಿಸುತ್ತೇವೆ ಎಂದು ಹೇಳಿದರು.
ವಿದ್ಯಾನಿಧಿ ಯೋಜನೆ
ರೈತರ ಮಕ್ಕಳು ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. 420 ಕೋಟಿ ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಪ್ರಧಾನಿಗಳ ಕನಸನ್ನು ನನಸು ಮಾಡಲು ಮೂರು ತಾಲ್ಲೂಕುಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಅದರಲ್ಲಿ 420 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಕೆ.ಆರ್. ಪೇಟೆ ತಾಲ್ಲೂಕಿಗೆ ನೀಡಲಾಗುವುದು ಎಂದರು.
ಮೈಷುಗರ್ ಆರಂಭ
ಮೈಷುಗರ್ ಕಾರ್ಖಾನೆ ಆರಂಭಿಸಲು ಸಭೆ ಮಾಡಿ ತೀರ್ಮಾನಿಸಿದ್ದು,ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿ ಆಗಸ್ಟ್ ತಿಂಗಳಲ್ಲಿ ಕಾರ್ಖಾನೆ ಆರಂಭಿಸಿ ರೈತರ ಕಬ್ಬನ್ನು ಅರೆಸುತ್ತೇವೆ ಎಂದು ಹೇಳಿದರು.
ಸ್ತ್ರೀಶಕ್ತಿ ಸಂಘಗಳಿಗೆ ನೆರವು
ಮುಂದಿನ ತಿಂಗಳಿನಿಂದ ಸುಮಾರು 40 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ತಲಾ 1.50 ಲಕ್ಷ ಆರ್ಥಿಕ ನೆರವು ನೀಡಲಾಗುವುದು, ಅದಕ್ಕೆ ಪೂರಕವಾಗಿ ಬ್ಯಾಂಕ್ ವ್ಯವಸ್ಥೆ, ಪ್ರಾಜೆಕ್ಟ್ ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಗಳನ್ನೂ ಕಲ್ಪಿಸಲಾಗುವುದು. ಮಹಿಳೆಯರೂ ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು. ದೇಶದ ತಲಾವಾರು ಆದಾಯದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಅದರಲ್ಲಿ ಕೇವಲ 30 % ಜನ ರಾಜ್ಯದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇನ್ನುಳಿದ 70% ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ.
ಈ ದುಡಿಯುವ ವರ್ಗ ರಾಜ್ಯದ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳಾ ಸಂಘದ ಸದಸ್ಯರನ್ನು ಸೇರಿಸಲು ಯೋಜನೆ ರೂಪಿಸಲಾಗುವುದು. 857 ಕೋಟಿ ರೂ. ಅನುದಾನ ದೀನದಲಿತರ ಅಭ್ಯುದಯ, ಗಂಗಾಕಲ್ಯಾಣ ಯೋಜನೆ, ಯುವಕರಿಗೆ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳಿಗೆ ಮೀಸಲಿರಿಸಲಾಗಿದೆ ಎಂದರು.
ಕಂದಾಯ ಇಲಾಖೆಯಿಂದ ಪೌತಿ ಖಾತೆ ಯೋಜನೆ, ಅಂಗವಿಕಲ ವೇತನ, ಬಸವ ವಸತಿ ಯೋಜನೆಯಡಿ ಸಹಾಯಧನ, ಆರೋಗ್ಯ ಇಲಾಖೆಯಿಂದ ಕನ್ನಡಕ ವಿತರಣೆ, ಆಯುಷ್ಮಾನ ಆರೋಗ್ಯ ಕಾರ್ಡ್ ವಿತರಣೆ, ಮಹಿಳಾ ಇಲಾಖೆಯಿಂದ ಮಹಿಳಾ ಸ್ವಸಹಾಯ ಸಂಘದಿಂದ ಸಣ್ಣ ಉದ್ದಿಮೆ ಪ್ರಾರಂಭಿಸಲು ಸಹಾಯಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು. ಎಸ್.ಎಸ್.ಎಲ್ ಸಿ. ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಎಂ.ಕಾರಜೋಳ, ರೇಷ್ಮೆ, ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಅಬಕಾರಿ ಸಚಿವ ಗೋಪಾಲಯ್ಯ, ಕಂದಾಯ ಸಚಿವ ಆರ್. ಅಶೋಕ್,ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಎಸ್. ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಸಿಇಓ ಶಾಂತಾ ಎಂ.ಹುಲ್ಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




