Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು| ಗಾಝಾದಲ್ಲಿನ ಇಸ್ರೇಲ್ ನರಮೇಧ ಖಂಡಿಸಿ ಬೃಹತ್ ‘ಮಾನವ ಸರಪಳಿ’

ಹಮಸ್ ಹಾಗೂ ಇಸ್ರೇ ಗಾಝಾದ ಮೇಲೆ ನಿರಂತರವಾಗಿ ಬಾಂಬ್ ಸುರಿಯುತ್ತಿರುವುದನ್ನು ಖಂಡಿಸಿ, ಬೆಂಗಳೂರಿನಲ್ಲಿ ನಾಗರಿಕರು ಸೋಮವಾರ(ಅ.16) ಮಾನವ ಸರಪಳಿ ನಡೆಸಿದರು.

ಬಹುತ್ವ ಕರ್ನಾಟಕ ನೀಡಿದ್ದ ಕರೆಗೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ರೈಲು ನಿಲ್ದಾಣದ ಸಮೀಪ ಜಮಾವಣೆಗೊಂಡಿದ್ದ ಸಾವಿರಕ್ಕೂ ಅಧಿಕ ಮಂದಿ ನಾಗರಿಕರು, ಪ್ಯಾಲೆಸ್ತೀನ್ ಜೊತೆ ನಾವು ನಿಲ್ಲುತ್ತೇವೆ. ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸುತ್ತೇವೆ. ಗಾಝಾ ಮೇಲೆ ನಡೆಯುತ್ತಿರುವ ಅಕ್ರಮ ದಾಳಿಯನ್ನು ನಿಲ್ಲಿಸುವಂತೆ ಭಾರತ ಸರ್ಕಾರವು ಇಸ್ರೇಲ್ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ನಿಲ್ಲಬೇಕೆಂದರೆ, ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ದೇಶವಾಗಿ ಗುರುತಿಸಿ ಅಲ್ಲಿನ ಜನರಿಗೆ ಮೂಲಭೂತ ಹಕ್ಕುಗಳು ನೀಡುವುದೇ ಪರಿಹಾರ ಎಂದು ಬರೆದಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

“>

ವಿದೇಶಾಂಗ ಸಚಿವಾಲಯದ ವಕ್ತಾರರು ಇತ್ತೀಚೆಗೆ ಮಾಧ್ಯಮಗೊಂದಿಗೆ ಮಾತನಾಡಿದ್ದ ವೇಳೆ, ‘ಭಾರತವು ಯಾವಾಗಲೂ ಪ್ಯಾಲೆಸ್ತೀನ್ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸಲು ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ ಹಾಗೂ ಇಸ್ರೇಲ್‌ನೊಂದಿಗೆ ಅಕ್ಕಪಕ್ಕದಲ್ಲಿ, ಶಾಂತಿಯಿಂದ ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ವಾಸಿಸುವ ಹಾಗೆ ಪ್ರತಿಪಾದಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸ್ವಾಗತಾರ್ಹ. ಈ ಗುರಿ ತಲುಪುವಂತೆ ವಿಶ್ವಸಂಸ್ಥೆ ಮೇಲೆ ಸಹ ಒತ್ತಡ ಹಾಕಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಂತಾರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಸದ್ಯಕ್ಕೆ ನಡೆಯುತ್ತಿರುವ ಯುದ್ಧದ ಬಗ್ಗೆ ತನಿಖೆ ನಡೆಸಬೇಕು ಹಾಗೂ ವರದಿಯನ್ನು ಬಹಿರಂಗಪಡಿಸಬೇಕು. ಪ್ಯಾಲೆಸ್ತೀನ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿರುವವರ ಮೇಲೆ, ಪ್ಯಾಲೆಸ್ತೀನ್ ಪರ ಪ್ರತಿಭಟಿಸುವವರ‌ ಮೇಲೆ ಪೊಲೀಸರ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು.

ಪ್ಯಾಲೆಸ್ತೀನ್‌ಗೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವವರನ್ನು ಬಂಧಿಸುವುದು, ಪ್ರಕರಣ ದಾಖಲಿಸುವುದು ನಿಲ್ಲಬೇಕು. ಭಾರತೀಯ ವಾಕ್ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಲವರ ಬಂಧನ

ಮೌನ ಪ್ರತಿಭಟನೆ ನಡೆಸಿದ್ದರೂ ಕೂಡ ಮುಂಚೂಣಿಯಲ್ಲಿದ್ದ ಕೆಲವು ಪ್ರತಿಭಟನಾಕಾರರನ್ನು ಕಬ್ಬನ್ ಪಾರ್ಕ್‌ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದುದನ್ನು ಗಮನಿಸಿದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಗೆ ಕರೆದೊಯ್ದಿದ್ದಾರೆ. ವಶಕ್ಕೆ ಪಡೆಯುವ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು.

ಈ ಮೌನ ಪ್ರತಿಭಟನೆಗೆ ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿ, ಭಾಗವಹಿಸಿದ್ದರು. ಈ ವೇಳೆ ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ್, ಮಧು ಭೂಷಣ್, ಮಮತಾ ಸಾಗರ್, ಕ್ಲಿಫ್ಟನ್ ರೊಜಾರಿಯೋ, ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಲಬೀದ್ ಶಾಫಿ, ದಾನಿಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!