Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ರೈತರ ಜಮೀನಿಗೆ ಪರಿಹಾರ ನೀಡದ ಉಪವಿಭಾಗಾಧಿಕಾರಿ ವಾಹನ -ಕಚೇರಿ ಸಾಮಗ್ರಿ ಜಪ್ತಿ !

ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಒಳಚರಂಡಿ ಮಂಡಳಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಒದಗಿಸಲು ಉಪವಿಭಾಗಾಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರ ಆದೇಶದಂತೆ ಕೋರ್ಟ್ ಅಮೀನರು ರೈತರ ಸಹಕಾರದೊಂದಿಗೆ ಉಪವಿಭಾಗಾಧಿಕಾರಿಗಳ ವಾಹನ ಹಾಗೂ ಕಚೇರಿಯ ಚರಾಸ್ತಿಗಳನ್ನು ಮತ್ತು ಪುರಸಭೆಯ ಚರಾಸ್ತಿಗಳನ್ನೂ ಶುಕ್ರವಾರ ಜಪ್ತಿ ಮಾಡಿದರು.

2006ರಲ್ಲಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣಕ್ಕಾಗಿ ಪಾಂಡವಪುರ ಪಟ್ಟಣದ ಹೊರವಲಯದಲ್ಲಿ ಒಳಚರಂಡಿ ಮಂಡಳಿ, ರೈತ ಸತ್ಯನಾರಾಯಣ ಅವರಿಗೆ ಸೇರಿದ 30 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ಮುಂದಾಗಿತ್ತು. ಪರಿಹಾರದ ಮೊತ್ತ ಮಾರುಕಟ್ಟೆ ದರಕ್ಕಿಂತ ತೀರಾ ಕಡಿಮೆ ಎನ್ನುವ ಕಾರಣಕ್ಕಾಗಿ ರೈತ ಪರಿಹಾರವನ್ನು ತಿರಸ್ಕರಿಸಿ, ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ರೈತರು ಮನವಿ ಪುರಸ್ಕರಿಸಿದ ನ್ಯಾಯಾಲಯ ಚದರ ಅಡಿಗೆ 375 ರೂ.ನಂತೆ ಪರಿಹಾರ ನೀಡುವಂತೆ 2021ರಲ್ಲಿ ಆದೇಶ ನೀಡಿತ್ತು. ನ್ಯಾಯಾಲಯ ಅದೇಶ ನೀಡಿ ಎರಡು ವರ್ಷ ಕಳೆದರೂ ಪರಿಹಾರ ನೀಡಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಪುರಸಭೆ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ಅಮೀನರು ಉಪವಿಭಾಗಾಧಿಕಾರಿಗಳ ವಾಹನ ಸೇರಿದಂತೆ ಕಚೇರಿಯ ಕಂಪ್ಯೂಟರ್, ಕುರ್ಚಿ, ಕಡತಗಳು ಸೇರಿದಂತೆ ಮೌಲ್ಯಯುತ ಚರಾಸ್ತಿಗಳನ್ನು ಹಾಗೂ ಪುರಸಭೆಯ ಚರಾಸ್ತಿಗಳನ್ನು ಜಪ್ತಿ ಮಾಡಿದರು.

4.89 ಕೋಟಿ ರೂ. ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ನಡೆಸುತ್ತಿರುವ ರೈತ ಸತ್ಯನಾರಾಯಣ ಅವರಿಗೆ 2.25ಕೋಟಿ ರೂ. ಡಿಪಾಸಿಟ್ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತಾದರೂ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಸ್ಪಂದಿಸಿಲ್ಲ. ಕಳೆದೆರಡು ವರ್ಷದಲ್ಲಿ ಎರಡು ಬಾರಿ ವಾಹನ ಜಪ್ತಿ ಹಾಗೂ ನಾಲ್ಕು ಬಾರಿ ಚರಾಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಅಧಿಕಾರಿಗಳು ಜಪ್ತಿಗೆ ತೆರಳಿದಾಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕಾಲಾವಕಶ ಕೇಳಿಕೊಂಡಿದ್ದರು. ಆನಂತರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲ ಧರ್ಮಪುರ ಲೋಕೇಶ್ ತಿಳಿಸಿದರು.

ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ನ್ಯಾಯಾಲಯದ ತೀರ್ಪಿನಂತೆ ಈ ಹಿಂದಿನ ಸರ್ಕಾರ, ರೈತರ ಜಮೀನಿಗೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೆ ಪುರಸಭೆ ಅಧಿಕಾರಿಗಳು ಪರಿಹಾರ ಮೊತ್ತವನ್ನು ಒದಗಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಹೋರಾಟದ ಮೂಲಕ ಪರಿಹಾರದ ಮೊತ್ತವನ್ನು ಪಡೆಯಲು ನ್ಯಾಯಾಲಯ ಮೋರೆ ಹೋಗಿದ್ದೇವೆ. ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಸಹ ಪಾಲಿಸುತ್ತಿಲ್ಲ. ಅಧಿಕಾರಿಗಳು ಪರಿಹಾರದ ಮೊತ್ತ ಒದಗಿಸದಿದ್ದರೆ ಮುಂದಿನ ಕಾನೂನು ಹೋರಾಟ ನಡೆಸುವುದಾಗಿ ರೈತ ಸತ್ಯನಾರಾಯಣ ತಿಳಿಸಿದರು.

ಈ ವೇಳೆ ವಕೀಲ ಪುಟ್ಟಸ್ವಾಮಿ, ಅಮೀನರಾದ ತ್ರಿವೇಣಿ, ಸಿದ್ದರಾಜು, ಆನಂದ, ರೈತರಾದ ಸತ್ಯನಾರಾಯಣ, ರಮೇಶ್, ಕುಮಾರಸ್ವಾಮಿ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ