ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ರಚನೆಯಾಗಿರುವ ವಿರೋಧ ಪಕ್ಷಗಳ INDIA ಮೈತ್ರಿಕೂಟ ಮುಂಬೈನಲ್ಲಿ ತನ್ನ ಮೂರನೇ ಸಭೆ ನಡೆಸುತ್ತಿದ್ದು, 13 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ಶುಕ್ರವಾರ ರಚಿಸಿದೆ. ಈ ಸಮಿತಿಗೆ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ.
ಮೂಲಗಳ ಪ್ರಕಾರ 13 ಸದಸ್ಯರ ವಿರೋಧ ಸಮಿತಿಯು ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಸಪ್ಟೆಂಬರ್ 30ರೊಳಗೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಲಾಗಿದೆ.
INDIAದ ‘ಸಮನ್ವಯ ಸಮಿತಿ’ ಯಲ್ಲಿನ ನಾಯಕರ ಪಟ್ಟಿ
- ಕೆ ಸಿ ವೇಣುಗೋಪಾಲ್ (ಕಾಂಗ್ರೆಸ್)
- ಶರದ್ ಪವಾರ್ (ಎನ್‌ಸಿಪಿ)
- ಎಂ ಕೆ ಸ್ಟಾಲಿನ್ (ಡಿಎಂಕೆ)
- ತೇಜಸ್ವಿ ಯಾದವ್ (ಆರ್‌ಜೆಡಿ)
- ಅಭಿಷೇಕ್ ಬ್ಯಾನರ್ಜಿ (ಟಿಎಂಸಿ)
- ಹೇಮಂತ್ ಸೋರೆನ್ (ಕಾಂಗ್ರೆಸ್)
- ಸಂಜಯ್ ರಾವುತ್ (ಯುಬಿಟಿ ಶಿವಸೇನೆ)
- ರಾಘವ್ ಚಡ್ಡಾ (ಎಎಪಿ)
- ಡಿ ರಾಜಾ (ಸಿಪಿಐ)
- ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್)
- ಮೆಹಬೂಬಾ ಮುಫ್ತಿ (ಪಿಡಿಪಿ)
- ಲಲನ್ ಸಿಂಗ್ (ಜೆಡಿಯು)
ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ
ಈ ಮೈತ್ರಿಕೂಟ ಇಂದು ಸಮನ್ವಯ ಸಮಿತಿ ರಚಿಸಿದೆ ಆದರೆ ಲೋಗೋವನ್ನು ಅನಾವರಣ ಮಾಡಿಲ್ಲ. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ”ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ”ಸೇಡಿನ ರಾಜಕಾರಣ” ಮಾಡುತ್ತಿದೆ ಎಂದು ಆರೋಪಿಸಿದರು. ಇಂಡಿಯಾ ನೆಲೆಗೊಳ್ಳುತ್ತಿದ್ದಂತೆ ಸರ್ಕಾರವು ಪ್ರತಿಪಕ್ಷ ನಾಯಕರ ವಿರುದ್ಧ ಏಜೆನ್ಸಿಗಳನ್ನು ಹೆಚ್ಚು ದುರುಪಯೋಗಪಡಿಸಿಕೊಳ್ಳುತ್ತದೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
”ರೈತರು, ಯುವಕರು, ಮಹಿಳೆಯರು, ಅಂಚಿನಲ್ಲಿರುವವರು, ಮಧ್ಯಮ ವರ್ಗದವರು, ಬುದ್ಧಿಜೀವಿಗಳು, ಎನ್‌ಜಿಒಗಳು ಮತ್ತು ಪತ್ರಕರ್ತರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವೂ ಬಿಜೆಪಿಯ ಸರ್ವಾಧಿಕಾರಿ ಆಡಳಿತದಿಂದ ಬಳಲುತ್ತಿದೆ” ಎಂದು ಖರ್ಗೆ ಹೇಳಿದರು. ”ಮುಗ್ಧ ರೈಲು ಪ್ರಯಾಣಿಕರು ಮತ್ತು ಶಾಲಾ ಮಕ್ಕಳ ಮೇಲಿನ ದ್ವೇಷದ ಅಪರಾಧಗಳಿಗೆ ಕೇಂದ್ರ ಸರ್ಕಾರವೇ ಕಾರಣ” ಎಂದು ಖರ್ಗೆ ದೂರಿದ್ದಾರೆ.
ಸಭೆಗೆ ಮುನ್ನ ತೆಗೆದ ವಿರೋಧ ಪಕ್ಷದ ನಾಯಕರ ಗುಂಪಿನ ಫೋಟೊ ಶೇರ್ ಮಾಡಿದ ಖರ್ಗೆ, ”ಭಾರತದ ಪ್ರಜೆಗಳು ಇನ್ನು ಮುಂದೆ ಯಾವುದೇ ದ್ರೋಹಕ್ಕೆ ಒಳಗಾಗುವುದಿಲ್ಲ ಮತ್ತು 140 ಕೋಟಿ ಭಾರತೀಯರು ಬದಲಾವಣೆಯನ್ನು ತರಲು ನಿರ್ಧರಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕ ಕಾಳಜಿಯ ವಿಷಯಗಳ ಕುರಿತು ನಾವು ದೇಶದ ವಿವಿಧ ಭಾಗಗಳಲ್ಲಿ ಶೀಘ್ರವಾಗಿ ರ್ಯಾಲಿಗಳನ್ನು ನಡೆಸುತ್ತೇವೆ ಎಂದು ಇಂಡಿಯಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ”ನಾವು ಸಾಧ್ಯವಾದಷ್ಟು ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲು ನಿರ್ಧರಿಸುತ್ತೇವೆ” ಎಂದು ಮೈತ್ರಿಕೂಟ ಹೇಳಿದೆ.
ಸಭೆಯ ಆರಂಭದಲ್ಲಿ ಇಂಡಿಯಾ ಮೈತ್ರಿಕೂಟ ಚಂದ್ರಯಾನ-3 ಬಗ್ಗೆ ನಿರ್ಣಯವನ್ನು ಅಂಗೀಕರಿಸಿತು. ”ನಮ್ಮ ದೇಶವನ್ನು ಹೆಮ್ಮೆ ಪಡಿಸಿದ ಅತ್ಯುತ್ತಮ ಸಾಧನೆಗಳಿಗಾಗಿ ನಾವು ಇಡೀ ಇಸ್ರೋ ಸಂಸ್ಥೆಯನ್ನು ಅಭಿನಂದಿಸುತ್ತೇವೆ. ಇಸ್ರೋದ ಸಾಮರ್ಥ್ಯಗಳು ಮತ್ತು ಸಾಮರ್ಥ್ಯಗಳನ್ನು ನಿರ್ಮಿಸಲು, ವಿಸ್ತರಿಸಲು ಆರು ದಶಕಗಳನ್ನು ತೆಗೆದುಕೊಂಡಿದೆ. ಚಂದ್ರಯಾನ-3 ವಿಶ್ವವನ್ನು ರೋಮಾಂಚನಗೊಳಿಸಿದೆ, ಇದು ನಾಳೆ ಆದಿತ್ಯ-ಎಲ್ 1 ಉಡಾವಣೆಗಾಗಿ ಕಾತುರದಿಂದ ನೋಡುತ್ತಿದೆ. ಇಸ್ರೋದ ಅಸಾಧಾರಣ ಸಾಧನೆಗಳು ನಮ್ಮ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಪಡಿಸುತ್ತದೆ. ವೈಜ್ಞಾನಿಕ ಪ್ರಯತ್ನಗಳು ನಮ್ಮ ಯುವಕರಿಗೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆಂದು ನಾವು ಭಾವಿಸುತ್ತೇವೆ” ಎಂದು INDIA ಹೇಳಿದೆ.




