ಮಂಡ್ಯದ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ರಾಜ್ಯ ನೇಕಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಅಧ್ಯಕ್ಷ ಎಸ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಮಾತನಾಡಿ ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯಿಂದ ಐದಾರು ನಿಗಮಗಳಿಗೆ ಹಲವರನ್ನು ಅಧ್ಯಕ್ಷರನ್ನಾಗಿ ಮಾಡಿ ಸೇವೆ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಹೇಳಿದರು.
ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು 2022 ರಲ್ಲಿ ಪ್ರಾರಂಭಿಸಲಾಯಿತು. ಪ್ರಸಕ್ತ ಸಾಲಿನಲ್ಲಿ 224 ಕೋಟಿ ರೂಗಳನ್ನು ವಿವಿಧ ಯೋಜನೆಗಳಿಗೆ ಆಯವ್ಯಯದಲ್ಲಿ ನೀಡಲಾಗಿದೆ ಎಂದರು.

ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗರ ಸಮುದಾಯವನ್ನು ಅಭಿವೃದ್ಧಿ ನಿಗಮದಿಂದ ಮೇಲೆತ್ತಲು ರೈತರಿಗೆ ಬೆನ್ನೆಲುಬಾಗಿರುವ ಗಂಗಾ ಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನವನ್ನು ನೀಡಲಾಗಿದೆ ಇದನ್ನು ಸಮುದಾಯದ ಜನರು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ರಾಜ್ಯ ನೇಕಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮಾತನಾಡಿ ನೇಕಾರರ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಇರುವುದು ಹುಬ್ಬಳ್ಳಿಯಲ್ಲಿ ಇಲ್ಲಿಯ ತನಕ ದಕ್ಷಿಣ ಕರ್ನಾಟಕದ ಭಾಗದವರು ಯಾರು ಸಹ ನೇಕಾರರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿರಲಿಲ್ಲ ಇಂತಹ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ನನಗೆ ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
ಕಳೆದ 30 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಸಾಮಾನ್ಯ ಸೇವಕನಾಗಿ ಕೆಲಸ ಮಾಡಿದ ಪರಿಣಾಮವಾಗಿ ನೇಕಾರರ ಅಭಿವೃದ್ಧಿ ನಿಗಮದ ರಾಜ್ಯದ ಸೇವಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಅಧಿಕಾರಿಗಳು ಹಾಗೂ ಲೈಸೆನ್ಸ್ ದಾರರು ಅವಿನಾಭಾವ ಸಂಬಂಧ ಇಟ್ಟುಕೊಂಡು ಕೆಲಸ ಮಾಡಬೇಕು. ಸನ್ನದ್ದುದಾರರ ಸಮಸ್ಯೆಗಳು ಬಂದಾಗ ನನ್ನದೇ ಸಮಸ್ಯೆ ಎಂದು ಭಾವನೆ ಇಟ್ಟುಕೊಂಡು ಸದಾ ನಿಮ್ಮೊಡನೆ ಇದ್ದು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಅಧ್ಯಕ್ಷ ಎಸ್. ಚಂದ್ರಶೇಖರ್ ಮಾತನಾಡಿ ಸಂಸ್ಥೆ ಬೆಳೆಯಬೇಕಾದರೆ ಆಸಕ್ತಿ ಹಾಗೂ ಸಹಕಾರ ಇರಬೇಕು. ಸಂಸ್ಥೆಗಳನ್ನು ಕಷ್ಟಪಟ್ಟು ಕಟ್ಟಿ ನಿಮ್ಮದೇ ಆದ ಕಟ್ಟಡವನ್ನು ಸನ್ನದುದಾರರು ಕಟ್ಟುವ ಮೂಲಕ ಸಂಸ್ಥೆಗಳನ್ನು ಹೆಮ್ಮರವಾಗಿ ಬೆಳೆಸಿದಾಗ ಗೌರವ ಸಿಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗಶಯನ ಮಾತನಾಡಿ ಕರ್ನಾಟಕ ರಾಜ್ಯದ ಅನೇಕ ಊರುಗಳು ಕೈಮಗ್ಗ ಉತ್ಪನ್ನಕ್ಕೆ ಹೆಸರುವಾಸಿ ಯಾಗಿದೆ. ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್ ಅವರು ಕೈಮಗ್ಗದ ವಹಿವಾಟನ್ನು ಹೆಚ್ಚಿಸಬೇಕು. ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ನೇಕಾರರ ಭವಿಷ್ಯವನ್ನು ಉಜ್ವಲ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಹೆಚ್.ಪಿ.ಮಹೇಶ್, ಉಪಾಧ್ಯಕ್ಷ ದಿನೇಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ದಾಸೇಗೌಡ, ಹಿರಿಯ ಸನ್ನದ್ದುದಾರರಾದ ಹನುಮಂತೇ ಗೌಡ, ಗೋವಿಂದರಾಜು ಅರುಣ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದರು.




