Friday, November 20, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರದ ಗಮನಕ್ಕೆ ವಸತಿ ರಹಿತರ ಸಮಸ್ಯೆ | ಶಾಸಕ ರವಿಕುಮಾರ್ ಕಾರ್ಯಕ್ಕೆ ಹೋರಾಟಗಾರರ ಅಭಿನಂದನೆ

ಬಡ ಜನರ ಭೂಮಿ ಸಮಸ್ಯೆಗಳಿಗೆ ಸಂಬಂಧಿಸಿದ ಹಲವು ಹಕ್ಕೊತ್ತಾಯಗಳನ್ನು ವಸತಿ ಸಚಿವರ ಸಮ್ಮುಖದಲ್ಲಿ ಚರ್ಚಿಸಿ, ಸರ್ಕಾರಕ್ಕೆ ತಲುಪಿಸಲು ಸಹಕರಿಸಿದ ಮಂಡ್ಯ ಶಾಸಕ ರವಿಕುಮಾರ್‌ಗೌಡ ಅವರಿಗೆ ವಸತಿ ರಹಿತರ ಪರವಾಗಿ ಅಭಿನಂದನೆಗಳು ಸಲ್ಲಿಸುವುದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಜನರ ಭೂಮಿ ಸಂಬಂಧಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಜನಶಕ್ತಿ, ಮಂಡ್ಯ ಜಿಲ್ಲಾ ಶ್ರಮಿಕ ನಗರ ವಾಸಿಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಜಿಲ್ಲಾಡಳಿತ, ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗಿದ್ದು, ಮಾಡಿದ ಹೋರಾಟಕ್ಕೆ ಫಲ ಸಿಗುವ ಭರವಸೆ ಮೂಡಿದೆ ಎಂದರು.

ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ, 3 ತಿಂಗಳಲ್ಲಿ ಹಕ್ಕುಪತ್ರ ವಿತರಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನ, ಹಾಲಹಳ್ಳಿ ಸ್ಲಂ ಬೋರ್ಡ್‌ನಲ್ಲಿ 80 ಮನೆ ನಿರ್ಮಾಂಕ್ಕೆ 2.50 ಕೋಟಿ ಮತ್ತು ಎರಡೂವರೆ ಎಕರೆಯಲ್ಲಿ ನೂನತವಾಗಿ 500 ಮನೆ ನಿರ್ಮಾಣ ಮಾಡಲು ಕ್ರಮ, ಬಿ.ಡಿ. ಕಾಲೋನಿಯ ಕೆರೆ ಅಂಗಳದಲ್ಲಿ ನಿರ್ಮಾಣವಾಗುತ್ತಿರುವ ವಸತಿಗಳನ್ನು ವಸತಿ ರಹಿತರಿಗೆ ವಿತರಣೆ ಮಾಡಲು ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಅಂತೆಯೇ ಮಂಡ್ಯ ನಗರದ ಮುಸ್ಲಿಂ ಬ್ಲಾಕ್, ಕಾಳಪ್ಪ ಬಡಾವಣೆ ಸೇರಿದಂತೆ ನಗರದ ಎಲ್ಲಾ ಸ್ಲಂಗಳ ಜಟಿಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮಂಡ್ಯ ಶಾಸಕರಲ್ಲಿ ಮನವಿ ಮಾಡಿದರು.

ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಮಂಡ್ಯ ತಾಲೂಕಿನಲ್ಲಿ ಯಾವುದೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಕಾನೂನು ಕಾಲೇಜು ಇಲ್ಲವಾಗಿದ್ದು, ಬಡವರು, ಶ್ರಮಿಕರಿಗೆ ಈ ವಿಷಯವಾಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಸರ್ಕಾರಿ ಇಂಜಿನಿಯರಿಂಗ್ ಮತ್ತು ಕಾನೂನು ಕಾಲೇಜು ಆರಂಭಿಸಲು ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ನಗರಕೆರೆ ಜಗದೀಶ್, ಶಿವಣ್ಣ, ಲಿಂಗಮ್ಮ, ಲತಾ, ವಿಜಯ್, ರವಿ, ದೊರೆ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ