ಅತಿಯಾದ ಗಾಳಿ ಮತ್ತು ಮಳೆಗೆ ರೈತರ ಬೆಳೆ ಹಾನಿಯಾಗಿದೆ. ಇದರ ಪರಿಹಾರಕ್ಕೆ ಸರ್ಕಾರ ನೀಡುತ್ತಿರುವುದು ಸಾಲುವುದಿಲ್ಲ. ಬಿಜೆಪಿ ಸರ್ಕಾರ ರೈತರ ಬಗೆಗಿನ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.
ಚಿಂದಗಿರಿಕೊಪ್ಪಲು ಗ್ರಾಮದ ಬಳಿ ಇರುವ 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲುವೆಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಇವರು, ರೈತರ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರು ಖರ್ಚು ಮಾಡಿರುವ ಬೆಳೆ ನಷ್ಟವಾಗಿರುತ್ತದೆ. ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಕಳೆದ ಬಾರಿಗಿಂತ ಬಿಜೆಪಿ ಸರ್ಕಾರ ಇಂದು ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಳೆಯಿಂದ ಹಾನಿಯಾದ ಮನೆ ಕುಸಿತಕ್ಕೆ 5 ಲಕ್ಷರೂ ಪರಿಹಾರ ನೀಡಲಾಗಿತ್ತು. ಅದೇ ರೀತಿ ಈ ಬಾರಿಯೂ ಸಹ ಹೆಚ್ಚಿನ ಪರಿಹಾರ ನೀಡಬೇಕು ಎಂದು ಹೇಳಿದರು.
ಕಳೆದ ಬಾರಿ ಮಳೆಯಿಂದಾಗಿ ಕಾಲುವೆ ಹೊಡೆದು, ಈ ಭಾಗದ ರೈತರ ಜಮೀನಿಗೆ ನೀರು ನುಗ್ಗಿ ತುಂಬಾ ತೊಂದರೆಯನ್ನು ಉಂಟು ಮಾಡಿತ್ತು. ಈ ಸಂಬಂಧವಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತುರ್ತಾಗಿ ಕ್ರಮವಹಿಸಬೇಕು ಎಂದು ತಿಳಿಸಿದ್ದೆವು. ಈ ಸಂಬಂಧ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿದೆ.
ಚಿಂದಗಿರಿಕೊಪ್ಪಲು, ಬಲ್ಲೇನಹಳ್ಳಿ ಗ್ರಾಮಗಳ ರೈತರ ನೂರಾರು ಎಕರೆ ಪ್ರದೇಶ ಈಗ ನೀರಾವರಿ ಆಗಲಿದೆ ಎಂದು ತಿಳಿಸಿದರು. ಈ ಕಾಲುವೆ ಉಪಯೋಗವನ್ನು ದುದ್ದ ಹೋಬಳಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಅಲ್ಲಿನ ಸ್ಥಳೀಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಿಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕುಮಾರ್, ಆದಿಶೇಷ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಆಲೆಮನೆ ಶ್ರೀಕಂಠ, ನಾಗೇಂದ್ರ ಸೇರಿದಂತೆ ಹಲವರು ಇದ್ದರು