ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆಯೇ ಹೊರತು ಜೆಡಿಎಸ್ ಅಭ್ಯರ್ಥಿಗಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ನಡೆಯುವುದರಿಂದ ಲೆಕ್ಕಾಚಾರ ಈ ಬಾರಿ ಬೇರೆಯೇ ಆಗಲಿದೆ. ಮಧು ಮಾದೇಗೌಡ ಅವರ ಹೆಸರನ್ನು ಒಂದು ವರ್ಷದ ಮುಂಚೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾಲ್ಕು ಜಿಲ್ಲೆಗಳ ಮತದಾರರನ್ನು ಸಂಪರ್ಕಿಸಿದ್ದು, ಅವರು ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದರು.
ಮಧು ಮಾದೇಗೌಡ ಡಮ್ಮಿ ಅಭ್ಯರ್ಥಿ ಎಂದು ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಅವರು ಹಾಸ್ಯಾಸ್ಪದ ಹೇಳಿಕೆ ನೀಡುವುದರಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ದಿನೇಶ್ ಗೂಳಿ ಗೌಡರನ್ನು ಗೆಲ್ಲಿಸಿಕೊಳ್ಳುವ ಮೂಲಕ ನಮ್ಮ ಶಕ್ತಿ ಏನೆಂದು ತೋರಿಸಿದ್ದೇವೆ.
ಸುರೇಶ್ ಗೌಡರ ಹೇಳಿಕೆ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು. ಜಿ.ಮಾದೇಗೌಡರು ಮಾಡಿರುವ ಅಭಿವೃದ್ಧಿ ಕೆಲಸಗಳು, ಜನಪರ ಹೋರಾಟಗಳ ಬಗ್ಗೆ ಮತದಾರರಿಗೆ ತಿಳಿದಿದ್ದು, ಅವರ ಮಗನಿಗೆ ಈ ಬಾರಿ ಮತದಾರರು ಮತ ನೀಡಲಿದ್ದಾರೆ ಎಂದರು.
ಮೇ.24ರಂದು ಮಧು ಜಿ. ಮಾದೇಗೌಡ ಅವರ ಪರ ಚುನಾವಣೆ ಪ್ರಚಾರ ಸಭೆ ನಗರದ ಚಂದ್ರದರ್ಶನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಆಗಮಿಸಲಿದ್ದಾರೆ.ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ನಗರ ಅಧ್ಯಕ್ಷ ರುದ್ರಪ್ಪ, ಮೈಷುಗರ್ ಮಾಜಿ ಅಧ್ಯಕ್ಷ ರಾಮಲಿಂಗಯ್ಯ, ಮುಖಂಡರಾದ ಜಬಿವುಲ್ಲಾ, ಸುರೇಶ್ ಕಂಠಿ,ಸಿ.ಎಂ. ದ್ಯಾವಪ್ಪ ದೀಪಕ್,ನಾಗರಾಜ್ ಉಪಸ್ಥಿತರಿದ್ದರು.