ಮನುಷ್ಯ ಜೀವವೈವಿಧ್ಯಗಳೊಂದಿಗೆ ಬದುಕಬೇಕಿದೆ. ಪ್ರಕೃತಿ ಮತ್ತು ಜೀವರಾಶಿಗಳ ನಡುವೆ ಅಸಮತೋಲನವಾದರೆ ಮನುಕುಲ ವಿನಾಶ ಖಚಿತ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ಮಂಡ್ಯ ನಗರದ ಜಿಲ್ಲಾ ಕಾರಾಗೃಹ ಮುಂಭಾಗದ ರಸ್ತೆಯಂಚಿನಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮತ್ತು ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ ಆಯೋಜಿಸಿದ್ದ ವಿಶ್ವ ಜೀವವೈವಿಧ್ಯ ದಿನ ಪ್ರಯುಕ್ತ ನಮ್ಮ ಉಳಿವಿಗಾಗಿ ಜೀವಿಗಳ ಉಳಿಸೋಣ ಧ್ಯೇಯದೊಂದಿಗೆ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇರುವ ಒಂದು ಭೂಮಿಯಲ್ಲಿ ಮನುಷ್ಯ ವೈವಿಧ್ಯಮಯ ಜೀವಿಗಳೊಂದಿಗೆ ಜೀವಿಸಬೇಕಿದೆ. ಜೀವರಾಶಿಗಳಿಗೆ ಪ್ರಕೃತಿಯೇ ಆಧಾರ, ಪ್ರಕೃತಿ ಮತ್ತು ಜೀವರಾಶಿಗಳ ಅಸಮತೋಲನ ಉಂಟಾದರೆ ಮನುಕುಲ ವಿನಾಶವಾಗಲಿದೆ ಎಂದು ನುಡಿದರು.
ಭೂಮಂಡಲ ಕೇವಲ ಜಲಗ್ರಹವಲ್ಲ, ಜೈವಿಕ ವೈವಿಧ್ಯದ ಅಪೂರ್ವ ಗ್ರಹವಾಗಿದೆ, ನಮ್ಮ ವರ್ತಮಾನ, ಭವಿಷ್ಯದ ಬದುಕು ನಿಂತಿರುವುದು ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದಲೇ ಎಂಬುದನ್ನು ಮರೆಯಬಾರದು. ಜೀವರಾಶಿಗಳು ಒಂದಕ್ಕೊಂದು ಸರಪಳಿ ಜೀವನಕ್ರಮದಲ್ಲಿ ಬದುಕುತ್ತಿವೆ.
ಮನುಷ್ಯನ ಅತಿಯಾಸೆಗೆ ಎಲ್ಲವೂ ಏರುಪೇರಾಗಿ ಅನಾಹುತಗಳನ್ನು ಅಹ್ವಾನಿಸಿ ಅನುಭವಿಸುತ್ತಿದ್ದಾನೆ ಎಂದು ಎಚ್ಚರಿಸಿದರು.
1992ರಲ್ಲಿ ವಿಶ್ವ ಸಂಸ್ಥೆಯು ಮೇ.22ರಂದು ಜೀವ ವೈವಿಧ್ಯ ದಿನವನ್ನು ಆಚರಿಸುತ್ತಿದೆ, ಇಡೀ ಜಗತ್ತು ಇದರಲ್ಲಿ ಪಾಲ್ಗೊಳ್ಳುತ್ತಿದೆ, ಈ ವರ್ಷದ ಘೋಷವಾಕ್ಯ” ಜೀವಿಗಳೊಡನೆ ಭವಿಷ್ಯ ಹಂಚಿಕೊಳ್ಳುವತ್ತ ಜೀವಿಗಳನ್ನು ನಾಶಮಾಡದೆ ಹಾಗೇ ಉಳಿಸುತ್ತೀರಿ” ಎಂಬುದಾಗಿದೆ.
ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಸ್ಯ ಹಾಗೂ ಪ್ರಾಣಿ ಸಂಪತ್ತು ವೃದ್ಧಿಗೆ ಸಂಕಲ್ಪ ಕೈಗೊಳ್ಳುವುದು ಎಲ್ಲ ಜವಬ್ದಾರಿ ಎಂದು ತಿಳಿಸಿದರು.
ದೇಶದ ಪ್ರತಿ ಗ್ರಾಮಪಂಚಾಯಿತಿಯಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಸಮಿತಿ ಇರಬೇಕು, ಪಂಚಾಯಿತಿಗೊಂದು ವನವನ್ನು ಸೃಷ್ಠಿಸೋಣ, ನಿಮ್ಮ ಊರಿನ ಅಪರೂಪದ ಔಷಧ ಸಸ್ಯಗಳು, ವಿಶಿಷ್ಠ ಹಣ್ಣು-ಗೆಡ್ಡೆ-ಗೆಣಸು, ತರಕಾರಿಗಳು, ಪ್ರಾಣಿ-ಪಕ್ಷಿ, ಜಲಚರಗಳ ದಾಖಲಾತಿ ಮಾಡಬೇಕು, ಜೀವ ಸಂಕಲಗಳ ಉಳಿವಿಗೆ ಅಭಿಯಾನ ಆರಂಭಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಸಿ ನೆಟ್ಟು ನೀರೆರೆಯುವ ಮೂಲಕ ಶಾಸಕ ಎಂ.ಶ್ರೀನಿವಾಸ್ ಮತ್ತು ಗಣ್ಯರು ಚಾಲನೆ ನೀಡಿದರು. ರಸ್ತೆಯಂಚಿನಲ್ಲಿ ಹಲವು ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್, ಕೃಷಿಕ ಲಯನ್ಸ್ ಸಂಸ್ಥೆ ಉಪಾಧ್ಯಕ್ಷ ಮೋಹನ್‌ಕುಮಾರ್, ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್ ಮತ್ತಿತರರಿದ್ದರು.