ಪ್ರತಿಯೊಬ್ಬರೂ ಕನಸು ಕಾಣುವ ಜೊತೆಗೆ ಸಾಧನೆಯನ್ನು ಮಾಡಬೇಕು. ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಕೀರ್ತಿನಗರದಲ್ಲಿ ನಡೆದ ಮಹಾದೇವಯ್ಯ ಅವರ 7 ನೇ ವರ್ಷದ ಪುಣ್ಯ ಸ್ಮರಣೆ ಮತ್ತು ಜಾನಪದ ಗಾಯನ ಲೋಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮನುಷ್ಯ ಸಮಾಜಕ್ಕೆ ಪ್ರೀತಿ ಪಾತ್ರರಾಗಿ ಬೆಳೆಯ ಬೇಕು. ಮಹದೇವಯ್ಯ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ತಿಳಿಸಿದರು.
ಹಾಸ್ಯ ನಟ ಮಳವಳ್ಳಿ ಸಾಯಿಕೃಷ್ಣ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಜಾನಪದ ಕಲಾವಿದರ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ನಾವೆಲ್ಲರೂ ಪ್ರೋತ್ಸಾಹ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಡಿಜಿಪಿ ನಂಜುಂಡಸ್ವಾಮಿ, ಪೋಟರೆ ನಾಗರಾಜು, ರಾಮಚಂದ್ರ, ವಿಶ್ವಾಸ್ ಮತ್ತಿತರರು ಇದ್ದರು.




