Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗ್ಯಾರಂಟಿಗಳಿಂದ ಬರಗಾಲದಲ್ಲೂ ಜನ ಬದುಕುಳಿದಿದ್ದಾರೆ: ಚಲುವರಾಯಸ್ವಾಮಿ

ರಾಜ್ಯದಲ್ಲಿ ಐದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಂದಿವೆ, ಇದರಿಂದ ರಾಜ್ಯದ ಕೋಟ್ಯಾಂತರ ಜನರಿಗೆ ಉಪಯೋಗವಾಗಿದೆ,  ಮೋದಿ ಗ್ಯಾರಂಟಿ ಎಲ್ಲಿ? ಬರಗಾಲದಲ್ಲಿ ಹಣ ಬಿಡುಗಡೆ ಮಾಡದವರು, ರೈತರಿಗೆ ಏನು ಕೊಡ್ತಾರೆ. ನಮ್ಮ ತೆರಿಗೆ ಪಾಲು ನಮಗೆ ಕೊಡ್ತಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಗ್ಯಾರಂಟಿ ಇಲ್ಲದಿದ್ದರೆ ಈ ಬರಗಾಲದಲ್ಲಿ ಜನ ಏನು ಮಾಡಬೇಕಿತ್ತು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕೃಷ್ಣರಾಜನಗರದ ರೇಡಿಯೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮೋದಿ, ಆರ್ ಎಸ್ ಎಸ್ ಬಗ್ಗೆ ಅತ್ಯಂತ ಕೆಳಮಟ್ಟದಲ್ಲಿ ಟೀಕೆ ಮಾಡಿದ್ದ ಜೆಡಿಎಸ್ ಈಗ ಅವರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್, ಬಿಜೆಪಿ 2018ರ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದರು.

ಕೋಮುವಾದಿ ಶಕ್ತಿಯನ್ನು ದೂರ ಇಡಬೇಕೆಂದು ನಿಮ್ಮನ್ನು ಮುಖ್ಯಮಂತ್ರಿ ಮಾಡಿದೆವು. ಮುಖ್ಯಮಂತ್ರಿ ಆಸೆಗೆ ನಮ್ಮ ಜೊತೆ ಬಂದ್ರಿ. ಆಗಲೇ ಬಿಜೆಪಿ ಜೊತೆ ಸರ್ಕಾರ ಮಾಡಬಹುದಿತ್ತಲ್ಲ. ವಿಶ್ವನಾಥ್ ಅವರ ಗೌರವ ತೆಗೆದ್ರಿ, ನಾರಾಯಗೌಡ ಅವರನ್ನು ಓಡಿಸಿ ಈಗ ಅವರ ಬಳಿಯೇ ಹೋಗಿ ಬೆಂಬಲ ಕೇಳುತ್ತಿದ್ದೀರಿ ಎಂದು ವ್ಯಂಗ್ಯ ಮಾಡಿದರು.

14 ತಿಂಗಳು ನೀವೇ ಸಿಎಂ, ಜಿಲ್ಲೆಯ ಮೂವರು ಮಂತ್ರಿಗಳಿದ್ದರೂ ಜಿಲ್ಲೆಗೆ ಏನು ಮಾಡಿದ್ರಿ? ಏನು ಅಭಿವೃದ್ಧಿ ಮಾಡಿದ್ದೀರಿ ಅಂತ ನೀವು ಅವರ ಮನೆ ಮುಂದೆ ಹೋಗಿ ಗಲಾಟೆ ಮಾಡಲಾಗಲ್ಲ. ಆದರೆ ಎಲೆಕ್ಷನ್ ನಲ್ಲಿ ಅವರ ವಿರುದ್ಧ ಇವಿಎಂನಲ್ಲಿನ ಬಟನ್ ಒತ್ತಿದ್ದರೆ ಸಾಕು ಎಂದು ಹೇಳಿದರು.

ಸರ್ಕಾರ ನಮ್ಮದಿದೆ. ಜಿಲ್ಲೆಯಲ್ಲಿ ಏಳು ಜನ ನಮ್ಮ ಶಾಸಕರಿದ್ದಾರೆ. ಜಿಲ್ಲೆಯವರೇ ಸಚಿವರಿದ್ದಾರೆ. ನಮ್ಮ ಅಭ್ಯರ್ಥಿ ಗೆದ್ದರೆ ಸರ್ಕಾರದ ಜೊತೆ ಸೇರಿಕೊಂಡು ಅಭಿವೃದ್ಧಿ ಮಾಡುತ್ತಾರೆ. ಅದೇ ಕುಮಾರಸ್ವಾಮಿ ಲೋಕಸಭಾ ಸದಸ್ಯರಾಗಿ ಏನು ಮಾಡಲ್ಲ ಸಾಧ್ಯ. ಅಷ್ಟಕ್ಕೂ ಎಷ್ಟು ಉಪಚುನಾವಣೆ ಮಾಡಿಸ್ತೀರಿ. ಎಷ್ಟು ಕ್ಷೇತ್ರ ಬದಲಾಯಿಸುತ್ತೀರಿ ಎಂದರು.

ಶ್ರೀರಾಮ ಸಕ್ಕರೆ ಕಾರ್ಖಾನೆ ಸಮಸ್ಯೆ ಬಗ್ಗೆ ಶಾಸಕರು ಹೇಳಿದ್ದಾರೆ. ಜೂನ್ ಕೊನೆ ವಾರದಲ್ಲಿ ನಮ್ಮ ನೂತನ ಸಂಸದರು, ಆಡಳಿತ ಮಂಡಳಿಯ ಜೊತೆ ಬಂದು ಸಮಸ್ಯೆ ಬಗೆಹರಿಸುತ್ತೇವೆ. ಆದರೆ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹೊಣೆ ನಿಮ್ಮದು ಎಂದು ಹೇಳಿದರು.

ಶಾಸಕ ರವಿಶಂಕರ್ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸುದ್ದಿಯಲ್ಲಿರುತ್ತೆ. ಸರ್ಕಾರದ ಮಟ್ಟದಲ್ಲಿ ಅನುದಾನ ತಂದು ಮೂಲಭೂತ ಸೌಕರ್ಯ ಕಲ್ಪಿಸಲು ನಿಮ್ಮ ಆಶೀರ್ವಾದ ಕಾರಣ. ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ. ಎಂದು ಕರೆಕೊಟ್ಟರು.

ಕೆ.ಆರ್.ನಗರದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ 10 ತಿಂಗಳಲ್ಲಿ 200 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಏತನೀರಾವರಿ ಯೋಜನೆ ಘೋಷಣೆ ಮಾಡಿದೆ. ಸಾರ್ವಜನಿಕ ಆಸ್ಪತ್ರೆಗೆ 1 ಕೋಟಿ, ಯುವಕರಿಗೆ ಕ್ರೀಡಾ ಚಟುವಟಿಕೆಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ, ಪಟ್ಟಣದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ 30 ಕೋಟಿ, ಒಳಚರಂಡಿ ಕಾಮಗಾರಿಗೆ 20 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೂರಾರು ಕೋಟಿ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮಾತನಾಡಿ, ಜನ ಸೇವೆ ಮಾಡಲೆಂದು ಬಂದಿದ್ದು ನನ್ನನ್ನು ಬೆಂಬಲಿಸಿ ಆಶೀರ್ವದಿಸಬೇಕು. ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಯೋಜನೆಗಳನ್ನು ಸ್ಮರಿಸಿಕೊಂಡು ನನಗೆ ಮತನೀಡಿ ಎಂದರು.

ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಚುನಾವಣೆಯಲ್ಲಿ ಮತ ಕೇಳಲು ಸಾಧನೆ ಇಟ್ಟುಕೊಂಡು ಬರಬೇಕಲ್ಲ. ಏನು ವಿಚಾರ ಇಟ್ಟುಕೊಂಡು ಮತಯಾಚನೆ ಮಾಡಲು ಬರುತ್ತಾರೆ. ಅಧಿಕಾರದಲ್ಲಿದ್ದಾಗ ಈ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಮೊಸಳೆ ಕಣ್ಣೀರು ಹಾಕಿಕೊಂಡು ಬರುವವರನ್ನು ಕೇಳಿ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮಗ ಸೋತಾಗ ಅಭಿವೃದ್ಧಿಗೆ ಮೀಸಲಿರಿಸಿದ್ದ ಎಂಟು ಸಾವಿರ ಕೋಟಿ ಬಂದ್ ಮಾಡಿಸಿದಿರಿ. ಮೋದಿಯನ್ನು ಟೀಕಿಸಿ ಈಗ ಅವರನ್ನೇ ತಬ್ಬಿಕೊಳ್ತಿದ್ದೀರಿ. ಜಾತ್ಯತೀತ ಪದ ತೆಗೆದುಹಾಕಿ ಬನ್ನಿ ಎಂದರು.

ವಿಧಾನಪರಿಷತ್ ಸದಸ್ಯರಾದ ಮಧು ಮಾದೇಗೌಡ ಮಾತನಾಡಿ, ಜೆಡಿಎಸ್ ನ ಹಲವು ಕಾರ್ಯಕರ್ತರು ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಕಾಂಗ್ರೆಸ್ ಸೇರಿದ್ದಾರೆ. ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ರವಿಶಂಕರ್ ಅವರ ಕೈ ಬಲಪಡಿಸಬೇಕೆಂದು ಕರೆಕೊಟ್ಟರು.

ಮಾಜಿ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಒತ್ತು ನೀಡಿ, ಅಂಬೇಡ್ಕರ್ ಸಿದ್ಧಾಂತ ಜಾರಿ ಮಾಡಿದೆ.
ಇಡೀ ದೇಶವೇ ಮಂಡ್ಯ ಚುನಾವಣೆ ನೋಡುತ್ತಿದೆ. ಕೇವಲ 500ರೂ.ಗೆ ಆಸೆ ಬೀಳಬೇಡಿ. ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳೆದುಕೊಳ್ಳಬೇಡಿ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಕಾರಣಿ ಸದಸ್ಯರಾದ ದೊಡ್ಡಸ್ವಾಮೇಗೌಡ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಬಹುಮತ ನೀಡಿದಂತೆ ಲೋಕಸಭೆಯಲ್ಲಿ ಲೀಡ್ ಕೊಡಬೇಕು. 400 ಸೀಟು ಕೊಟ್ರೆ ಸಂವಿಧಾನ ಬದಲಾವಣೆ ಮಾಡಿ, ಮೀಸಲಾತಿ ಕಡಿತ ಮಾಡುತ್ತಾರೆ. ಇದನ್ನು ಈಗಾಗಲೇ ಸಂಸದರ ಮುಖಾಂತರ ಹೇಳಿಕೆ ಕೊಡಿಸಿದ್ದಾರೆ ಎಂದರು.

ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ