Friday, November 20, 2026

ಪ್ರಾಯೋಗಿಕ ಆವೃತ್ತಿ

ಮೊಸಳೆ ಕಣ್ಣೀರಿಗೆ ಮೋಸ ಹೋಗಬೇಡಿ, ಅಪ್ಪ ಮಕ್ಕಳನ್ನು ತಿರಸ್ಕರಿಸಿ: ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಪ್ರಜ್ಞಾವಂತ ಮತದಾರರು ಸ್ವಾಭಿಮಾನಿಗಳಾಗಿ ಸ್ವಾರ್ಥ ಸಾಧನೆ ಮಾಡಲು ಹೊರಟಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತಿರಸ್ಕರಿಸಿ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ಚಂದ್ರು ಅವರನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೇ ಮಂಡ್ಯದಲ್ಲಿ ಪಕ್ಷ ಉಳಿಸುವ ಸಲುವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರಿಂದ ಜಿಲ್ಲೆಗೆ ಏನು ಕೊಡುಗೆ ಸಿಕ್ಕಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ 8 ಸಾವಿರ ಕೋಟಿ ಅನುದಾನ ನೀಡಿದ್ದೇನೆ ಎಂದು ಹೇಳಿದ್ದರು, ಆ ಹಣವು ಯಾರ ಜೇಬಿಗೆ ಹೋಯಿತು ಎಂಬುದನ್ನು ಜಿಲ್ಲೆಯ ಪ್ರಜ್ಞಾವಂತ ಜನರು ಯೋಚಿಸಿ ಆಲೋಚಿಸಿ ಮತ ನೀಡಬೇಕು ಎಂದರು.

ಜನತೆ ತಕ್ಕಪಾಠ ಕಲಿಸಬೇಕು

ಗಳಿಗೆಗೊಂದು ಗಂಟೆಗೊಂದು ಸುಳ್ಳು ಹೇಳುವ, ಕಣ್ಣೀರ ಕೋಡಿ ಹರಿಸಿ ಭಾವನಾತ್ಮಕ ಸಂಬಂಧವನ್ನು ಮುಂದಿಟ್ಟುಕೊಂಡು ಮತ ಕೇಳುವ ಸುಳ್ಳುಗಾರ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಭಾರಿ ಸೋಲಿನ ಕಹಿಯನ್ನು ಉಣಿಸುವ ಮೂಲಕ ಜಿಲ್ಲೆಯ ಜನತೆ ತಕ್ಕಪಾಠ ಕಲಿಸಬೇಕು. ಕುಮಾರಸ್ವಾಮಿ ಅವರು ಪ್ರಸ್ತುತ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಶಾಸಕರಾಗಿದ್ದುಕೊಂಡು ಕೆಲಸ ಮಾಡಲಿ ಅದಕ್ಕೆ ನಮ್ಮ ತಕರಾರು ಏನಿಲ್ಲ ಎಂದು ವ್ಯಂಗ್ಯವಾಡಿದರು.

ಬರಗಾಲದ ಸಂಕಷ್ಠದ ಸಮಯದಲ್ಲಿ ರಾಜ್ಯದ ಜನರು ಆತ್ಮಾಭಿಮಾನದಿಂದ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿರುವ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ನೀಡಿರುವ ಜನಪರವಾದ ಕಾರ್ಯಕ್ರಮಗಳನ್ನು ಬೆಂಬಲಿಸಲು, ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವನ್ನು ಮುಂದುವರೆಸಲು ನಮ್ಮನ್ನು ಬೆಂಬಲಿಸಿ ಸ್ಟಾರ್‌ಚಂದ್ರು ಅವರನ್ನು ಲೋಕಸಭೆಗೆ ಕಳಿಸಿ ಎಂದು ಮನವಿ ಮಾಡಿದರು.

ನಾನು ಸಚಿವನಾಗಿ 8 ತಿಂಗಳಾಗುತ್ತಾ ಬಂದಿದೆ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ 2ಸಾವಿರ ಕೋಟಿ ರೂಗಳಿಗೂ ಹೆಚ್ಚಿನ ಅನುದಾನವನ್ನು ನಾನು ಬಿಡುಗಡೆ ಮಾಡಿಸಿ ತಂದಿದ್ದೇನೆ. ಜಿಲ್ಲೆಯ ರೈತರ ಸ್ವಾಭಿಮಾನದ ಸಂಕೇತವಾಗಿರುವ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಹೊಸದಾಗಿ ನಿರ್ಮಿಸಲು, ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಕಟ್ಟಲು, ಕೆ.ಆರ್.ಪೇಟೆ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸಲು, ಹೇಮಾವತಿ ಮತ್ತು ವಿಸಿ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಈ ಭಾರಿ ಜಿಲ್ಲೆಯ ಜನತೆ ಕಾಂಗ್ರೇಸ್ ಬೆಂಬಲಿಸಿ ಲೋಕಸಭೆಗೆ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿರುವ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು) ಅವರಿಗೆ ಅಭೂತಪೂರ್ವ ಗೆಲುವು ತಂದುಕೊಡಬೇಕು ಕೋರಿದರು.

ಒಕ್ಕಲಿಗ ವಿರೋಧಿ ಅಪ್ಪ – ಮಕ್ಕಳು

ವಿಧಾನಪರಿಷತ್ ಮಾಜಿಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಒಕ್ಕಲಿಗ ವಿರೋಧಿಗಳಾಗಿರುವ ಅಪ್ಪಮಕ್ಕಳನ್ನು ಸಾರಾ ಸಗಟಾಗಿ ತಿರಸ್ಕರಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಒಕ್ಕಲಿಗ ವಿರೋಧಿಯಲ್ಲ, ಒಕ್ಕಲಿಗರ ಹಿತ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯಲು ದುಡಿಯುತ್ತಿರುವ ಬರಗಾಲದ ಸಂಕಷ್ಠದ ಸಮಯದಲ್ಲಿ ಕೊಟ್ಟ ಮಾತನ್ನು ತಪ್ಪದೇ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಕಾಂಗ್ರೇಸ್ ಪಕ್ಷವನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಚಲನಚಿತ್ರ ಹಾಸ್ಯನಟ ಸಾಧುಕೋಕಿಲ ಸಭೆಯಲ್ಲಿ ಮಾತನಾಡಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಮಳವಳ್ಳಿ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿಶಾಸಕ ಬಿ.ಪ್ರಕಾಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ವಿಜಯರಾಮೇಗೌಡ, ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಕೋಡಿಮಾರನಹಳ್ಳಿ ದೇವರಾಜು, ರವೀಂದ್ರಬಾಬೂ, ಕೆ.ಸಿ.ಮಂಜುನಾಥ್, ಡಿ.ಪ್ರೇಮಕುಮಾರ್, ಡಾ.ರಾಮಕೃಷ್ಣೇಗೌಡ, ಹರಳಹಳ್ಳಿ ವಿಶ್ವನಾಥ್, ಇಂದಿರಾ ಸತೀಶಬಾಬು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್, ಚೇತನಾ ಮಹೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ