ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಿರುವ ಬಿಜೆಪಿ ಪಕ್ಷಕ್ಕೆ ಮತ್ತೆ ಜನರು ಆಶೀರ್ವಾದ ಮಾಡಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಟೀಕಿಸಿದರು.
ಮಂಡ್ಯ ನಗರದ ಮೈಷುಗರ್ ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೃತ್ಯಕ್ಕೆ ಮುಂದಾಗಿದೆ. ದಲಿತ ಸಮುದಾಯದ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದಾಗ ಅವರ ರಕ್ಷಣೆಗೆ ಕಾಂಗ್ರೆಸ್ ಬರಲಿಲ್ಲ.ಜಾತಿ,ಧರ್ಮದ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದಲೇ ಮಾತ್ರ ಸಾಧ್ಯ ಎಂದರು.
ಬಿಜೆಪಿ ಪಕ್ಷ 224 ಕ್ಷೇತ್ರಗಳಲ್ಲಿಯೂ ಯುವ ಮೋರ್ಚಾ ಸಭೆಗಳನ್ನು ನಡೆಸಿ ಶಕ್ತಿ ವೃದ್ಧಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಹಾಗೂ ಕರ್ನಾಟಕ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರತಿ ಮನೆಯ ಬಾಗಿಲಿಗೆ ಯುವ ಮೋರ್ಚಾ ಕಾರ್ಯಕರ್ತರು ತಲುಪಿಸಿದರೆ,ಯಾವ ದುಷ್ಟ ಶಕ್ತಿಗಳಿಂದಲೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ದೇಶದ ರಕ್ಷಣೆಗೆ ಮೋದಿ ಸರ್ಕಾರ ಬದ್ಧವಾಗಿದೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ಲೋಕಾಯುಕ್ತ ಸಂಸ್ಥೆ ಮುಚ್ಚಿಸಿ ಎಸಿಬಿ ರಚಿಸಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿತು ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಸಾಧ್ಯವಿಲ್ಲ ಎಂಬ ಸವಾಲಿನ ನಡುವೆ ಬಿ.ಎಸ್. ಯಡಿಯೂರಪ್ಪನವರ ತವರಿನಲ್ಲಿ ಕೆ.ಸಿ. ನಾರಾಯಣ ಗೌಡರ ಗೆಲುವಿಗೆ ಬಿಜೆಪಿ ನಾಂದಿಯಾಡಿದೆ. ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಮಾನದಂಡ ಮುಂದುವರೆಯಲು ಕಾರ್ಯಕರ್ತರು ಶ್ರಮಿಸಬೇಕು. ವಿರೋಧ ಪಕ್ಷಗಳು ಬಿಜೆಪಿಗೆ ಠೇವಣಿ ಸಿಗುವುದಿಲ್ಲ ಎಂಬ ಟೀಕೆ ಬದಲಾಯಿಸಲು ಪ್ರಜ್ಞಾವಂತ ಮತದಾರರು ಜಾತಿ ರಾಜಕಾರಣಕ್ಕೆ ಅಂತ್ಯವಾಡಿ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರು. ಈ ವಿಜಯಯಾತ್ರೆ ಎಲ್ಲಾ ಕ್ಷೇತ್ರಕ್ಕೂ ವರ್ಗಾವಣೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮರಳಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ ಮಾತನಾಡಿ, ಮಂಡ್ಯದಲ್ಲಿ ಪರಿವರ್ತನೆಯ ಗಾಳಿ ಆರಂಭವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಒಂದೇ ಸರ್ಕಾರ ಇದ್ದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಮೈಷುಗರ್ ಹಾಗೂ ಪಿ ಎಸ್ ಎಸ್ ಕೆ ಕಾರ್ಖಾನೆ ಆರಂಭಕ್ಕೆ ಬಿಜೆಪಿ ಸರ್ಕಾರವೇ ಬರಬೇಕಾಯಿತು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆದು ಬಿಜೆಪಿ ಮರಳಿ ಅಧಿಕಾರಕ್ಕೆ ತರುವುದಕ್ಕೆ ಶ್ರಮಿಸಿ ಎಂದು ಮನವಿ ಮಾಡಿದರು.
ಸಮಾವೇಶ ಆರಂಭಕ್ಕೂ ಮುನ್ನ ಇಂಡುವಾಳು ಬಳಿಯಿಂದ ಮೈಷುಗರ್ ಕ್ರೀಡಾಂಗಣವರೆಗೂ ಸಾವಿರಾರು ಕಾರ್ಯಕರ್ತರು ಬೈಕ್ ರ‌್ಯಾಲಿಯಲ್ಲಿ ಬಿಜೆಪಿ ನಾಯಕರನ್ನು ಕರೆತಂದರು.
ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿ ತೇಜಸ್ವಿ ಸೂರ್ಯ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಇಂಡುವಾಳು ಸಚ್ಚಿದಾನಂದ, ಇಂದ್ರೇಶ್, ಮುನಿರಾಜು,ಫೈಟರ್ ರವಿ,ಎಸ್.ಪಿ.ಸ್ವಾಮಿ, ಚಂದಗಾಲು ಶಿವಣ್ಣ,ಕೆ. ಎಸ್. ನಂಜುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.




