Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಕುರಿತು HDK ನಡೆಗೆ ಕಾಂಗ್ರೆಸ್ ಮುಖಂಡರ ಆಕ್ಷೇಪ

ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ನೀಡಿರುವ ಆದೇಶ ಕುರಿತು ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದ ಸರ್ವಪಕ್ಷ ಸಭೆಗೆ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗೈರಾಗುವ ಮೂಲಕ ಒಂದು ಗಂಭೀರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯತೆ ವಹಿಸಿದ್ದಾರೆ. ಇದರಿಂದ ಕಾವೇರಿ ಕೊಳ್ಳದ ರೈತರಿಗೆ ನೋವುಂಟಾಗಿದೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಆಕ್ಷೇಪ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜು.14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕರೆದಿದ್ದ ಸರ್ವಪಕ್ಷಗಳ ಸಭೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗೈರಾಗುವ ಮೂಲಕ ಕಾವೇರಿ ಕೊಳ್ಳದ ರೈತರ ಮತ್ತು ಮಂಡ್ಯ ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿ ಅದೇ ದಿನ ಪಾಂಡವಪುರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಂಡ್ಯ ಜಿಲ್ಲೆಯ ರೈತರಿಗೆ ಸಭೆಗಿಂತ ಈ ರೀತಿಯ ಸ್ವಯಂ ಅಭಿನಂದನೆಯೇ ಮುಖ್ಯ ಎಂದು ತೋರ್ಪಡಿಸಿರುವುದನ್ನು ಖಂಡಿಸುತ್ತೇವೆ ಎಂದರು.

ಜನತೆ ತಕ್ಕ ಉತ್ತರವನ್ನು ನೀಡುತ್ತಾರೆ

ದೇವೇಗೌಡರು ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಮತ್ತು ಜಿಲ್ಲೆಯ ಹಿತಕ್ಕೆ ಸಭೆ ಕರೆದಾಗ ಧಾವಿಸುತ್ತಿದ್ದರು. ಅಲ್ಲದೇ ಚುನಾವಣೆಗೆ ಮುಂಚೆ ಕಾವೇರಿ ಸಮಸ್ಯೆಯನ್ನು ಬಗೆಹರಿಸುವುದಾಗಿ ವಾಗ್ದಾನ ಮಾಡಿ, ಈಗ ಶತಮಾನದ ಈ ಸಮಸ್ಯೆಯನ್ನು ಬಗೆಹರಿಸುವುದು ನಿಧಾನವಾಗುತ್ತದೆ ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತೀರಿ. ಮುಂದಿನ ದಿನಗಳಲ್ಲಿ ಈ ರೀತಿಯ ಉಡಾಫೆ ಮತ್ತು ಉದಾಶೀನತೆಗೆ ಜನತೆ ತಕ್ಕ ಉತ್ತರವನ್ನು ನೀಡುತ್ತಾರೆ. ಜರೂರಾಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಈಗಾಗಲೇ ಪ್ರಾಧಿಕಾರ ನೀಡಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಬೇಕೆಂದು ಎಂದು ಆಗ್ರಹ ಪಡಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಸರ್ವ ಪಕ್ಷಗಳ ಸಭೆಗೆ ಕುಮಾರಸ್ವಾಮಿ ಗೈರಾಗಿದ್ದಾರೆ. ಪಾಂಡವಪುರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಎಲ್ಲರೂ ಕುಮಾರಸ್ವಾಮಿ ಅವರಿಗೆ ಕಾಯುತ್ತಿದ್ದರು. ಆದರೂ ಸಹ ಉಡಾಫೆಯಿಂದ ಗೈರಾಗಿದ್ದಾರೆ. ಜಿಲ್ಲೆಯ ಜನ ಆಶೀರ್ವಾದ ಮಾಡಿದ್ರೆ ಕಾವೇರಿ ಸಮಸ್ಯೆ ಬಗೆಹರಿಸುವ ಮಾತು ಕೊಟ್ಟಿದ್ರು. ಜಿಲ್ಲೆಯ ಜನ ಹೆಚ್ಡಿಕೆಯನ್ನ ಗೆಲ್ಲಿಸಿ ಕೊಟ್ಟಿದ್ದಾರೆ. ನೀವು ಈ ರೀತಿಯ ನಡೆದುಕೊಳ್ಳುವುದು ಸರಿಯಲ್ಲ. ದೇವೇಗೌಡ್ರು ಆರೋಗ್ಯ ಸರಿ ಇದ್ದರೆ ಸಭೆಯಲ್ಲಿ ಭಾಗಿಯಾಗಿ ಸಲಹೆ ಕೊಡ್ತಿದ್ರು. ಪ್ರಧಾನಿಗೆ ತಮ್ಮ ಮಗನ ಮೂಲಕ ಕಾವೇರಿ ಸಮಸ್ಯೆಗೆ ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!