Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದ ‘ಪ್ರಜಾಧ್ವನಿ’ ಯಾತ್ರೆ

ಮಂಡ್ಯದಲ್ಲಿ ಶುಕ್ರವಾರ ನಡೆದ ಪ್ರಜಾಧ್ವನಿ ಸಮಾವೇಶ ‘ಕೈ’ ಪಾಳಯದ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು. ಪ್ರಜಾಧ್ವನಿ ಸಮಾವೇಶಕ್ಕೆ ಹರಿದು ಬಂದ ಜನಸಾಗರ ಕಂಡು ಕಾಂಗ್ರೆಸ್ ವರಿಷ್ಟರು, ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ,ಹುಮ್ಮಸ್ಸು ತುಂಬುವಲ್ಲಿ ಪ್ರಜಾಧ್ವನಿ ಸಮಾವೇಶ ಯಶಸ್ವಿಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಒಂದರಲ್ಲೂ ಗೆಲ್ಲದ ಕಾಂಗ್ರೆಸ್ ಪಕ್ಷ ಈ ಬಾರಿ ಗಮನಾರ್ಹ ಸಾಧನೆ ಮಾಡಲು ಪ್ರಜಾಧ್ವನಿ ಸಮಾವೇಶ ಪ್ರೇರಣೆ ನೀಡಿದೆ.

ಕೆಪಿಸಿಸಿ ಉಪಾಧ್ಯಕ್ಷರಾದ ಎನ್. ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರು ಪ್ರಜಾಧ್ವನಿ ಯಾತ್ರೆಯ ನೇತೃತ್ವವನ್ನು ವಹಿಸಿಕೊಂಡು ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಂದುಗೂಡಿಸಿ ಬಲ ಪ್ರದರ್ಶನ ಮಾಡಿದ್ದಾರೆ. ಈ ಸಮಾವೇಶದ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಣವೀಳ್ಯ ನೀಡಿದೆ.

ಚೈತನ್ಯ ನೀಡಿದ ಸಿದ್ದರಾಮಯ್ಯ, ಡಿಕೆಶಿ ಮಾತು

ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಡಿದ ಮಾತುಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಚೈತನ್ಯ ನೀಡಿತು.ಸಿದ್ದರಾಮಯ್ಯ ನವರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ಧ ಮಾಡಿದ ವಾಗ್ದಾಳಿಗೆ ಜನರು ಕೂಡ ಶಿಳ್ಳೆ, ಚಪ್ಪಾಳೆಗಳ ಮೂಲಕ ಕೂಗುತ್ತಾ ದನಿ ಸೇರಿಸಿದ್ದು ಕಾಂಗ್ರೆಸ್ ಮುಖಂಡರಲ್ಲಿ ಮತ್ತಷ್ಟು ಹುರುಪು ತಂದಿತು.ಕೊಟ್ಟ ಕುದುರೆ ಏರದವನು ವೀರನೂ ಅಲ್ಲ,ಶೂರನೂ ಅಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಎಚ್.ಡಿ.ಕುಮಾರಸ್ವಾಮಿ ಆಡಳಿತ ಟೀಕಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನವೇ 10 ಕೆಜಿ ಅಕ್ಕಿ ವಿತರಣೆ, 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ 2,000 ರೂ. ವಿತರಣೆ ಸೇರಿದಂತೆ ಐದು ಕಾರ್ಯಕ್ರಮಗಳ ಜಾರಿಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದು, ಮೈಷುಗರ್ ಕಾರ್ಖಾನೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೊಡನೆ ಅನುದಾನ ಹಾಗೂ ಹಾಲಿಗೆ 6 ರೂ.ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದು ಕೂಡ ಜನರ ಮನಸ್ಸಿಗೆ ಇಳಿದಿದೆ‌.

ಇನ್ನು ಭಾವುಕರಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಸಹ ಈ ಮಣ್ಣಿನ ಮಗ.ನಾಡಪ್ರಭು ಕೆಂಪೇಗೌಡರ ಮಗ ನಿಮ್ಮ ಮನೆಯ ಮಗನಾದ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಬಂದಿದ್ದೇನೆ. ನನಗೆ ಶಕ್ತಿ ಕೊಡಿ ಎಂದು ಮನವಿ ಮಾಡುವ ಮೂಲಕ ಒಕ್ಕಲಿಗ ಸಮುದಾಯದ ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವಲ್ಲಿ ಸಫಲರಾದರು.

ಮಂಡ್ಯ ಜಿಲ್ಲೆ ಒಕ್ಕಲಿಗ ಸಮುದಾಯದ ಭದ್ರಕೋಟೆಯಾಗಿದ್ದು, ಜೆಡಿಎಸ್ ವರಿಷ್ಠರಾದ ಎಚ್.ಡಿ‌.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಪ್ರಾಬಲ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಕೂಡ ನಾನು ಕೂಡ ಈ ಮಣ್ಣಿನ ಮಗ ಎನ್ನುವ ಮೂಲಕ ನನಗೂ ಅಧಿಕಾರ ಹಿಡಿಯಲು ಶಕ್ತಿ ನೀಡಿ ಎಂದು ಮನವಿ ಮಾಡಿದ್ದು ಕೂಡ ಮತಗಳಾಗಿ ಪರಿವರ್ತನೆ ಆಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.

ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೆವು. ಆದರೆ ಅವರು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಅಧಿಕಾರ ನಡೆಸುವ ಮೂಲಕ ಶಾಸಕರ ವಿಶ್ವಾಸ ಕಳೆದುಕೊಂಡು ಅಧಿಕಾರದಿಂದ ಕೆಳಗಿಳಿದರು.ಇದರಲ್ಲಿ ಕಾಂಗ್ರೆಸ್ ಪಕ್ಷದ ತಪ್ಪು ಸ್ವಲ್ಪವೂ ಇರಲಿಲ್ಲ‌ ಎನ್ನುವುದನ್ನು ಒಕ್ಕಲಿಗ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.

ಜೆಡಿಎಸ್ ಗೆ ನೀಡುವ ಒಂದೊಂದು ಮತವು ಬಿಜೆಪಿಗೆ ನೀಡಿದಂತಾಗುತ್ತದೆ. ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕುವ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಕೊಡಿ, ನಾವು ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಎಐಸಿಸಿ ಕರ್ನಾಟಕ ಉಸ್ತುವಾರಿ ರಣಜಿತ್‌ ಸಿಂಗ್‌ ಸುರ್ಜೆವಾಲಾ, ಮಾಜಿ ಸಚಿವ ಕೃಷ್ಣ ಬೈರೇಗೌಡ 40 ಪರ್ಸೆಂಟ್ ಕಮಿಷನ್ ಹೊಡೆಯುವ ಬಿಜೆಪಿ ಲೂಟಿ ಸರ್ಕಾರ ಜನರಿಗೆ ಸಾಕಾಗಿ ಹೋಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಪಕ್ಷ ಬೇಕು, ಬಿಜೆಪಿ ಸರ್ಕಾರ ನಯಾ ಪೈಸೆ ಸಾಲವನ್ನು ಮನ್ನಾ ಮಾಡಿಲ್ಲ.ಆದರೆ ಶ್ರೀಮಂತರ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಆರೋಪಿಸಿದರು.

ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ನೇತೃತ್ವ

ಮಾಜಿ ಸಚಿವ ಚಲುವರಾಯಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ಅಜನ್ಮ ಶತ್ರು ಎಂದಿದ್ದಾರೆ.ಆದರೆ ನಾನು ಅವರಿಗೆ ಯಾವುದೇ ಮೋಸ,ವಂಚನೆ ಮಾಡಿಲ್ಲ. ಈಗಲೂ ವೈಯಕ್ತಿಕವಾಗಿ ನನಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಗೌರವ ಇದೆ‌. ದೇವೇಗೌಡರ ಎದುರಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಆದರೆ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎನ್ನುವ ಮೂಲಕ ಒಕ್ಕಲಿಗರ ಮನ ಒಲಿಸಿಕೊಳ್ಳಲು ಮುಂದಾದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಕೂಡ ಕೆಆರ್‌ಎಸ್‌ ನಿಂದ ಬದುಕು ಕಟ್ಟಿಕೊಂಡಿರುವ ಜಿಲ್ಲೆಯ ರೈತರಿಗೆ ಕೃಷಿ ಬಿಟ್ಟು ಬೇರೆ ಯಾವ ಕೈಗಾರಿಕೆಗಳು ಬೆಳೆದಿಲ್ಲ, ಉದ್ಯೋಗ ಸೃಷ್ಟಿಯಾಗಿಲ್ಲ ಎಂದರು. ಮೈಸೂರು- ಬೆಂಗಳೂರು ನಡುವಿರುವ ಮಂಡ್ಯದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು, ಹನಿ ನೀರಾವರಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳ್ಳುವಂತೆ ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದಿದ್ದು ಕೂಡ ಜನರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.ಇವರಿಬ್ಬರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತಿದೆ.

ಬಲಾಬಲ ಪ್ರದರ್ಶನ

ಕಳೆದ ಡಿಸೆಂಬರ್ ನಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ನಡೆಸಿದ ಪಂಚರತ್ನ ಯಾತ್ರೆ ಒಂದು ಮಟ್ಟಿಗೆ ಯಶಸ್ವಿಯಾಗಿತ್ತು. ಅದಾದ ನಂತರ ಡಿಸೆಂಬರ್ 30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಬಿಜೆಪಿಯ ಜನಸಂಕಲ್ಪ ಸಮಾವೇಶದಲ್ಲಿ ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯ ಜನರು ಭಾಗವಹಿಸಿದ್ದರು. ಸಮಾವೇಶಕ್ಕೆ ಮಂಡ್ಯ, ಹಾಸನ ,ಚಾಮರಾಜನಗರ, ಮೈಸೂರು ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಕರೆತರಲಾಗಿತ್ತು.

ಪಂಚರತ್ನ ಯಾತ್ರೆ ಹಾಗೂ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಪರ್ಯಾಯವಾಗಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯನ್ನು ವಿರೋಧ ಪಕ್ಷಗಳ ಎದುರು ಬಲಾಬಲ ಪ್ರದರ್ಶನ ಮಾಡಲು ಬಳಸಿಕೊಳ್ಳುವ ವೇದಿಕೆಯಾಗಿ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಕಾಂಗ್ರೆಸ್ ನಾಯಕರಾದ ಎನ್. ಚಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರ ಸ್ವಾಮಿ ಅವರಿಬ್ಬರು ಜೋಡೆತ್ತಿನಂತೆ ದುಡಿದ ಪರಿಣಾಮ ಪ್ರಜಾಧ್ವನಿ ಸಮಾವೇಶ ಯಶಸ್ವಿಯಾಗಿದೆ.ಬಿಜೆಪಿ- ಜೆಡಿಎಸ್ ಪಕ್ಷಗಳ ಎದುರು ಕೈ ಪಡೆ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಇವೆಲ್ಲವೂ ಮತದಾರರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುವುದೋ ಎಂಬುದನ್ನು ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಸಾಬೀತು ಪಡಿಸಲಿದೆ.ಅಲ್ಲಿಯವರೆಗೆ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!