ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಗೆಲುವಿಗೆ ಸಹಕಾರಿಯಾಗಲಿದ್ದು ಜನ ನನ್ನ ‘ಕೈ’ ಹಿಡಿಯಲಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ನಾನಾ ಕಡೆಗಳಲ್ಲಿ ಮತಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಬರಗಾಲದ ಈ ಸಂದರ್ಭದಲ್ಲಿ ಗ್ಯಾರಂಟಿಗಳು ಜನರ ಸಂಕಷ್ಟಕ್ಕೆ ನೆರವಾಗಿವೆ. ಪಂಚ ಗ್ಯಾರಂಟಿಗಳ ಜೊತೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿರುವ ನ್ಯಾಯಪತ್ರ ಕೂಡ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದರು.
ಆರತಿ ಎತ್ತಿ ಬರಮಾಡಿಕೊಳ್ಳುತ್ತಿದ್ದಾರೆ
ಪ್ರಚಾರಕ್ಕೆ ಹೋದಕಡೆಯಲೆಲ್ಲ ಉತ್ತಮ ಸ್ಪಂದನೆ ಸಿಗುತ್ತಿದೆ. ಅದರಲ್ಲೂ ಮಹಿಳೆಯರು ಹೋದ ಕಡೆಯಲೆಲ್ಲ ಆರತಿ ಎತ್ತಿ ಬರಮಾಡಿಕೊಳ್ಳುತ್ತಿದ್ದಾರೆ. ಉಚಿತ ಬಸ್ ಪ್ರಯಾಣ, ವಿದ್ಯುತ್, ತಿಂಗಳಿಗೆ ಎರಡು ಸಾವಿರ ಹಣ ಸಿಗುತ್ತಿರುವುದರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವುದರ ಜೊತೆಗೆ ಕಾಂಗ್ರೆಸ್ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ ಎಂದರು.

ಎಸಿ ರೂಮ್ ನಲ್ಲಿ ಇರಲು ನನಗೆ ಇಷ್ಟವಿಲ್ಲ. ಜನರ ಮಧ್ಯೆ ಇರಬೇಕು. ಜನಸೇವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಹಣ ಮಾಡುವ ಉದ್ದೇಶ ನನಗಿಲ್ಲ. ನಾನು ಈ ಜಿಲ್ಲೆಯ ಮಣ್ಣಿನ ಮಗ ಎಂದು ಹೇಳಿದರು.
ಒಕ್ಕಲುತನ ಮಾಡಿದ್ದೇನೆ
ನಾನು ಉತ್ತಿದ್ದೇನೆ, ಬಿತ್ತಿದ್ದೇನೆ. ಒಕ್ಕಲುತನ ಮಾಡಿದ್ದೇನೆ, ರೈತಾಪಿ ವರ್ಗದವರ ಕಷ್ಟಸುಖಗಳನ್ನು ಚೆನ್ನಾಗಿ ಬಲ್ಲೆ. ನಾನು ಇದೇ ಜಿಲ್ಲೆಯ ಮಣ್ಣಿನ ಮಗ. ನಾನು ಈ ಜಿಲ್ಲೆಯ ರೈತನ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ ಎಂದರು.
ಯಡಿಯೂರಪ್ಪ ಹುಟ್ಟೂರಿನಲ್ಲಿ ಬಿರುಸಿನ ಪ್ರಚಾರ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಕೆ.ಆರ್.ಪೇಟೆ ತಾಲೂಕಿನ ಮಲಕೋನಹಳ್ಳಿಯಲ್ಲಿರುವ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಆರಂಭಿಸಿದರು.
ಐಚನಹಳ್ಳಿ, ಬೂಕನಕೆರೆ, ಬಲ್ಲೇನಹಳ್ಳಿ, ಗಂಜಿಗೆರೆ, ಬಳ್ಳೇಕೆರೆ, ಮಡವಿನ ಕೋಡಿ, ಹರಿಹರಪುರ, ಬಂಡಿಹೊಳೆ, ಮಾಕವಳ್ಳಿ, ಚೌಡೇನಹಳ್ಳಿ, ದಬ್ಬೆಘಟ್ಟ, ಮಾದಾಪುರ, ಆನೆಗೋಳ, ಐಕನಹಳ್ಳಿ, ಲಕ್ಷ್ಮಿಪುರ, ಕಿಕ್ಕೇರಿ ಸೇರಿದಂತೆ ನಾನಾ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜ್, ಮಂಡ್ಯ ಜಿಲ್ಲಾಧ್ಯಕ್ಷರಾದ ಸಿ.ಡಿ.ಗಂಗಾಧರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್, ರಮೇಶ್, ಕೃಷ್ಣಮೂರ್ತಿ, ಕೆ.ಬಿ.ರಮೇಶ್ ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಜೊತೆಯಲ್ಲಿದ್ದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಬಳ್ಳೇಕೆರೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಬಿಜೆಪಿ ಕಾರ್ಯಕರ್ತರು ಹಾಗೂ ಹರಿಹರಪುರದಲ್ಲಿ ಕೆ.ಆರ್.ಪೇಟೆ ತಾಲೂಕು ಬಿಜೆಪಿ ಮಹಿಳಾ ಉಪಾಧ್ಯಕ್ಷರು, ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಸ್ಟಾರ್ ಚಂದ್ರು ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.




