ಮಂಡ್ಯ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ನೇಹಮಯಿ ವ್ಯಕ್ತಿತ್ವ ಹಾಗೂ ಜನಪರ ಆಡಳಿತದಿಂದ ಆತಂಕಗೊಂಡಿರುವ ವಿಪಕ್ಷಗಳ ಮುಖಂಡರು ಗುಪ್ತ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ಮಾಡಲು ಮುಂದಾಗಿದ್ದಾರೆ ಎಂದು ಶಾಸಕ ಪಿ. ರವಿಕುಮಾರ್ಗೌಡ ಆರೋಪಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೆಹಲಿ ಮತ್ತು ಕೊಲ್ಕತ್ತಾ ಮೂಲದ ಖಾಸಗಿ ಏಜೆನ್ಸಿಯ ವ್ಯಕ್ತಿಗಳನ್ನು ಬಳಸಿಕೊಂಡು ರಾಜ್ಯದ ಹತ್ತು ಪ್ರಭಾವಿ ಸಚಿವರು ಹಾಗೂ ಆಯಕಟ್ಟಿನ ಅಧಿಕಾರಿಗಳನ್ನು ಹೆಣೆಯಲು ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರು ಮತ್ತು ರಾಜ್ಯದ ಬಿಜೆಪಿ ಉನ್ನತ ನಾಯಕರು ಸಂಚು ರೂಪಿಸಿ ವಿಫಲರಾಗಿದ್ದಾರೆ ಎಂದು ದೂರಿದರು.
ರಾಜ್ಯದ ೧೦ ಪ್ರಭಾವಿ ಸಚಿವರ ಚಲನವಲನ ಹಾಗೂ ಕಾರ್ಯಸೂಚಿಯನ್ನು ಗಮನಿಸಿ ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಕುತಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾರುವೇಷದ ಕಾರ್ಯಾಚರಣೆಯ ವ್ಯಕ್ತಿಗಳನ್ನು ವಾಸ್ತವ್ಯದಲ್ಲಿರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯದ ಪ್ರಭಾವಿ ಸಚಿವರು ಅಥವಾ ಹಿರಿಯ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಈ ಸಂಬAಧ ಸೂಕ್ತ ಸಂದರ್ಭದಲ್ಲಿ ಫೋಟೋ, ವಿಡಿಯೋ, ಆಡಿಯೋ ಬಿಡುಗಡೆ ಮಾಡುವುದಾಗಿ ಪೆನ್ಡ್ರೈವ್ ಪ್ರದರ್ಶಿಸಿದರು.
ಸ್ಟಿಂಗ್ ಆಪರೇಷನ್ ಕಾರ್ಯಾಚರಣೆ ಸಂಬAಧ ಭಾಗಿಯಾಗಿದ್ದ ಖಾಸಗಿ ವ್ಯಕ್ತಿಗಳು ಹಾಗೂ ಏಜೆನ್ಸಿ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ, ಈ ಸಂಬAಧ ತಾಳ್ಮೆಯಿಂದ ತನಿಖೆ ನಡೆಸುವವರೆಗೆ ಕಾಯಬೇಕು. ದಸರಾ ಅಥವಾ ದೀಪಾವಳಿಗೆ ಸ್ಟಿಂಗ್ ಆಪರೇಷನ್ ಕಾರ್ಯಾಚರಣೆಯ ಧಮಾಕ ಬಿಡುಗಡೆಯಾಗಬಹುದು, ಅಲ್ಲಿಯವರೆಗೆ ತಾಳ್ಮೆ ವಹಿಸಬೇಕೆಂದು ಮತ್ತೊಮ್ಮೆ ಪೆನ್ ಡ್ರೆöÊವ್ ಪ್ರದರ್ಶಿಸಿದರು.
ಬಿಜೆಪಿ ನಾಯಕರೇ ಸಿಡಿ ಹಗರಣಕ್ಕೆ ಹಣ ನೀಡಿದ್ದಾರೆ:
ಸ್ವತಃ ಮುಖ್ಯಮಂತ್ರಿಗಳೇ ಸಿಡಿ ಹಗರಣದ ರೂವಾರಿ ಎಂಬ ವಿಪಕ್ಷಗಳ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಊರಿಗೆ ಬಂದವರು ನೀರಿಗೆ ಬರದೇ ಇರುವುದಿಲ್ಲ, ತಾಳ್ಮೆಯಿಂದ ಕಾಯ್ದರೆ ಸಿಡಿ ಹಗರಣಕ್ಕೆ ಹಣ ನೀಡಿದ ಬಿಜೆಪಿ ಮುಖಂಡರು ಯಾರು ಎಂಬುದು ತಿಳಿಯಲಿದೆ ಎಂದರು.
ರಾಜ್ಯದ ಬಿಜೆಪಿ ಪಕ್ಷದ ಆಯಕಟ್ಟಿನ ಪ್ರಮುಖ ನಾಯಕರೇ ಸಿಡಿ ಪ್ರಕರಣಕ್ಕೆ ಹಣ ಒದಗಿಸಿದ್ದಾರೆ. ನಾವೇನು ಶಾಸಕರನ್ನು ಎಂದಿಗೂ ಗೋವಾ ಅಥವಾ ಚೆನ್ನೈಗೆ ಕರೆದುಕೊಂಡು ಹೋಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅನುಕಂಪದ ಮಾತನಾಡುವ ವಿಪಕ್ಷ ನಾಯಕರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಮೇಲೆ ಯಾವ ರೀತಿ ಪ್ರಹಾರ ನಡೆಸುತ್ತಿದ್ದರು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಈಗ ಸಿದ್ದರಾಮಯ್ಯನವರ ಬಗ್ಗೆ ಅನುಕಂಪದ ಮಾತನಾಡಿದರೆ ಏನು ಪ್ರಯೋಜನ ಎಂದು ಛೇಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುದ್ಧ ಹಸ್ತದ ರಾಜಕಾರಣಿ ಎಂಬುದು ರಾಜ್ಯದ ಜನರಿಗೆ ಅರ್ಥವಾಗಿದೆ. ಅಧಿಕಾರದಲ್ಲಿದ್ದಾಗ ಪದೇ ಪದೇ ನಿಂದಿಸುತ್ತಿದ್ದ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಈಗ ಅವರನ್ನು ಓಲೈಸಿಕೊಳ್ಳುವ ಮಾತನಾಡುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಸಮಗ್ರ ಅಭಿವೃದ್ಧಿ ಸಂಬAಧ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರ ಜತೆ ಆತ್ಮೀಯ ಭಾವದಿಂದ ವರ್ತನೆ ಮಾಡುತ್ತಿರುವುದರಿಂದ ವಿಪಕ್ಷಗಳ ನಾಯಕರು ಕಂಗಲಾಗಿದ್ದು, ಏನೂ ಮಾಡದ ಸ್ಥಿತಿಗೆ ತಲುಪಿದ್ದಾರೆಂದು ಮೂದಲಿಸಿದರು.




